ಹಾವೇರಿ: ವೀರಶೈವ ಪರಂಪರೆಯಲ್ಲಿ ಸ್ವಾಮೀಜಿಗಳನ್ನು ಮನೆಗೆ ಕರೆದು ಪ್ರಸಾದ ನೀಡುವುದು ಪದ್ಧತಿ. ಆದರೆ ಸ್ವಾಮೀಜಿಗಳೇ ಭಕ್ತರನ್ನು ಮಠಕ್ಕೆ ಕರೆದು ಪ್ರಸಾದ ನೀಡುವ ಪರಂಪರೆ ಹಾವೇರಿಯ ಸಿಂದಗಿ ಮಠದಲ್ಲಿದೆ. ಮಠದ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳ ಸ್ಮರಣೋತ್ಸವದ ದಿನಗಳ ನಂತರ ಮಠದಲ್ಲಿ ಊರೂಟ ಎಂಬ ಪದ್ಧತಿಯನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಈ ದಿನ ಮಠದ ವಟುಗಳು ಮನೆ ಮನೆಗೆ ತೆರಳಿ ಭಕ್ತರನ್ನು ಊರೂಟಕ್ಕೆ ಆಹ್ವಾನಿಸುತ್ತಾರೆ.
ಈ ದಿನಗಳಲ್ಲಿ ಸಿಂದಗಿ ಶಾಂತ ವೀರೇಶ್ವರರ ಗದ್ದುಗೆಯನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ವಿದ್ಯುತ್ ದೀಪಗಳಿಂದಲೂ ಮಠ ಜಗಮಗಿಸುತ್ತದೆ. ಐವತ್ತು ಸಾವಿರಕ್ಕೂ ಅಧಿಕ ಭಕ್ತರು ಆಗಮಿಸಿ ಗದ್ದುಗೆ ದರ್ಶನ ಪಡೆದ ನಂತರ ಪ್ರಸಾದ ಸೇವಿಸಿಸುತ್ತಾರೆ. ಭೋಜನವನ್ನು ವಟುಗಳೇ ತಯಾರಿಸಿ ಭಕ್ತರಿಗೆ ಉಣಬಡಿಸುತ್ತಾರೆ. ಉಂಡ ಭಕ್ತರ ತಟ್ಟೆಯನ್ನೂ ಸಹ ವಟುಗಳೇ ತೊಳೆಯುತ್ತಾರೆ. ಊರೂಟದ ದಿನ ಮಠದಲ್ಲಿ ಈ ಹಿಂದೆ ವ್ಯಾಸಂಗ ಮಾಡಿದ ಮಾಜಿ ವಿದ್ಯಾರ್ಥಿಗಳೂ ಬರುತ್ತಾರೆ.
ಈ ಪರಂಪರೆಯನ್ನು ಸಿಂದಗಿಮಠ ಲಿಂಗೈಕ್ಯ ಶಾಂತವೀರೇಶ್ವರ ಶ್ರೀಗಳು ಆಚರಣೆಗೆ ತಂದಿದ್ದರಂತೆ. ಅವರು ಲಿಂಗೈಕ್ಯರಾದ ನಂತರ ವಟುಗಳು ಪದ್ಧತಿಯನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಊಟಕ್ಕೆ ಉತ್ತರ ಕರ್ನಾಟಕದ ಖಡಕ್ ರೊಟ್ಟಿ, ಕರಿಂಡಿ ಪಾಯಸ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಕಜ್ಜಾಯ ಪರಂಪರೆಯೂ ಇದೆ. ಊರೂಟ ಇರುವಾಗ ಕೆಲವು ಗ್ರಾಮಗಳ ಭಕ್ತರು ಸಿಹಿ ಪದಾರ್ಥಗಳನ್ನು ಮಠಕ್ಕೆ ನೀಡುತ್ತಾರೆ. ಒಂದೇ ದಿನ ಐವತ್ತು ಸಾವಿರ ಜನರಿಗೆ ಎಲ್ಲಿಯೂ ಯಾವುದೇ ರೀತಿಯ ತೊಂದರೆಯಾಗದಂತೆ ವಟುಗಳು ನೋಡಿಕೊಳ್ಳುತ್ತಾರೆ. ಪ್ರಸ್ತುತ ವರ್ಷ ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಿದರು.
ಇನ್ನು ಕಲ್ಯಾಣದಲ್ಲಿರುವ ಮಠಗಳಿಗಿಂತ ಕೇವಲ ಒಂದು ಮಠ ಕಡಿಮೆ ಇರುವ ಕಾರಣ ಹಾವೇರಿಗೆ ಮರಿಕಲ್ಯಾಣ ಅಥವಾ ಎರಡನೇಯ ಕಲ್ಯಾಣ ಎಂಬ ಹೆಸರಿದೆ. ರಾಜ್ಯದಲ್ಲಿರುವ ಕೆಲವೇ ಕೆಲವು ಕಜ್ಜಾಯ ಮಠಗಳಲ್ಲಿ ಹಾವೇರಿ ಸಿಂದಗಿಮಠವೂ ಒಂದು. ಇಲ್ಲಿ ದಿನನಿತ್ಯ ವಟುಗಳು ಮನೆ ಮನೆಗೆ ತೆರಳಿ ಪ್ರಸಾದ ಸಂಗ್ರಹಿಸುತ್ತಾರೆ. ಹಾವೇರಿ ನಗರದಲ್ಲಿ ಸಂಚರಿಸುವ ವಟುಗಳ ತಂದ ಆಹಾರದಿಂದ ಮಠಕ್ಕೆ ಬಂದ ಭಕ್ತರಿಗೆ ಪ್ರಸಾದ ನೀಡಲಾಗುತ್ತದೆ. ಈ ಪ್ರಸಾದದಿಂದಲೇ ಮಠದಲ್ಲಿ ವಿದ್ಯಾಭ್ಯಾಸ ಮಾಡುವ ಎಲ್ಲ ವಟುಗಳಿಗೆ ಪ್ರಸಾದ ತಯಾರಿಸಲಾಗುತ್ತದೆ. ಸಿಂದಗಿಮಠದಲ್ಲಿ ದಿನದ 24 ಗಂಟೆ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಇರುವುದು ಮತ್ತೊಂದು ವಿಶೇಷ.
ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳಲ್ಲಿ ಅಯ್ಯಾಚಾರ ಅಥವಾ ಗ್ರಾಮದಲ್ಲಿ ಜಂಗಮರಾಗಿ ಕಾರ್ಯನಿರ್ವಹಿಸವವರು ಹಾವೇರಿ ಸಿಂದಗಿಮಠದ ಹಳೆಯ ವಿದ್ಯಾರ್ಥಿಗಳು. ಇಲ್ಲಿ ವ್ಯಾಸಂಗ ಮಾಡಿ ಲಿಂಗದೀಕ್ಷೆ ಸೇರಿದಂತೆ ವಿವಿಧ ಪಾಠೋಪಚಾರ ಕಲಿತ ನಂತರ ಅಲ್ಲಿಯ ಗ್ರಾಮಗಳಲ್ಲಿನ ವೀರಶೈವರ ಸಂಸ್ಕಾರಗಳನ್ನು ಇಲ್ಲಿ ಕಲಿತ ವಿದ್ಯಾರ್ಥಿಗಳೇ ಮಾಡುತ್ತಾರೆ. ಮಠದ ವಿವಿಧ ಶಾಖಾಮಠಗಳು ಬ್ಯಾಡಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿವೆ.
ಇದನ್ನೂ ಓದಿ: 123 ಅಡಿ ಉದ್ದದ ದೋಸೆ ತಯಾರಿಸಿ ಎಂಟಿಆರ್ನಿಂದ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್