ಹುಬ್ಬಳ್ಳಿ: "ಸಾರ್ವಜನಿಕ ಗಣೇಶನ ಅನ್ನ ಪ್ರಸಾದಕ್ಕೆ ಈ ಹಿಂದಿನಿಂದ ಇಲ್ಲದ ಅನುಮತಿ ಈಗೇಕೆ?. ಇಂಥ ಕಾನೂನುಗಳು ಹಿಂದೂಗಳ ಹಬ್ಬವಿದ್ದಾಗ ಮಾತ್ರ ಸರ್ಕಾರಕ್ಕೆ ನೆನಪಾಗುತ್ತವೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದೆ" ಎಂದು ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ವಾಗ್ಧಾಳಿ ನಡೆಸಿದರು.
ನಗರದ ಈದ್ಗಾ ಮೈದಾನದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ದರ್ಶನ ಪಡೆದುಕೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಗಣೇಶ ಪ್ರಸಾದಕ್ಕೆ ಅನುಮತಿ ನಿರ್ಧಾರವನ್ನು ನಾವು ಒಪ್ಪುವುದಿಲ್ಲ. ಎಲ್ಲರಿಗೂ ಸಮಾನವಾಗಿ ಕಾನೂನು ಜಾರಿಗೆ ತಂದರೆ ಒಪ್ಪೋಣ. ಈ ರೀತಿಯಾಗಿ ಹಿಂದೂ ವಿರೋಧಿ ನೀತಿ ಮಾಡುತ್ತಾ ಹೋದರೆ ಸರಿಯಲ್ಲ. ಕಾಂಗ್ರೆಸ್ ಮಾತೆತ್ತಿದರೆ ನಾವು ಸೆಕ್ಯೂಲರ್ ಅಂತಾರೆ. ಇದೇನಾ ಇವರ ಹಿಂದೂ ವಿರೋಧಿ ಸೆಕ್ಯೂಲರ್?" ಎಂದು ಕಿಡಿಕಾರಿದರು.
ಕಳೆದ ವರ್ಷ ಗಣೇಶ ಪೆಂಡಾಲ್‌ಗಳ ಮುಂದೆ ಗುಟ್ಕಾ ಬ್ಯಾನರ್ ಹಾಕಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಮುತಾಲಿಕ್, "ಕಳೆದ ಬಾರಿ ಗುಟ್ಕಾ, ಬ್ಯಾನರ್ ಕುರಿತು ಹೋರಾಟ ಮಾಡಿದೆವು. ಅದರ ಪರಿಣಾಮವಾಗಿಯೇ ಈ ಬಾರಿ ಒಂದೇ ಒಂದು ಬ್ಯಾನರ್ ಇಲ್ಲ. ನಮ್ಮ ಗಣೇಶ ಮಂಡಳಿಗಳ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ" ಎಂದರು.
ಮುಂದುವರೆದು, ಬಿಜೆಪಿ ಆಡಳಿತಾವಧಿಯಲ್ಲಿ ಗಣೇಶೋತ್ಸವ ಸಂದರ್ಭದಲ್ಲಿ ಡಿಜೆ ರಾತ್ರಿ ಹತ್ತು ಗಂಟೆಗೆ ನಿರ್ಬಂಧಿಸಿದ ಪ್ರಶ್ನೆಗೆ ಸಂಬಂಧಿಸಿ ಉತ್ತರಿಸಿದ ಅವರು, "ಈ ಎರಡು ಪಕ್ಷಗಳಿಗೆ ನಾನು ಬೈಯುತ್ತೇನೆ. ಹಿಂದೂ ವಿರೋಧಿ ನೀತಿ ಅನುಸರಿಸುವ ಎಲ್ಲಾ ಪಕ್ಷಗಳಿಗೂ ನಾವು ಬೈಯುತ್ತೇವೆ. ಬಿಜೆಪಿಯವರು ಹಿಂದೂಗಳನ್ನು ಬಳಸಿಕೊಳ್ಳುತ್ತಾರೆ. ಶ್ರೀರಾಮಸೇನೆ ಹಿಂದೂ ವಿರೋಧ ಮಾಡುವವರೆಲ್ಲರ ವಿರುದ್ಧ ನಿಲ್ಲುತ್ತದೆ. ನಮ್ಮ ಸಂಘಟನೆ ಏನೆಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ" ಎಂದು ತಿಳಿಸಿದರು.
ಇದನ್ನೂ ಓದಿ: ನಮ್ಮ ಪಕ್ಷದ್ದು ಸರಿಮಾಡಿಕೊಳ್ತೇವೆ, ಮೊದಲು ಅವರದ್ದು ನೋಡಿಕೊಳ್ಳಲಿ: ಪ್ರತಿಪಕ್ಷಗಳಿಗೆ ಪರಮೇಶ್ವರ್ ಟಾಂಗ್ - G Parameshwar