ಬೆಂಗಳೂರು: ಹಾಸನ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಅವರದ್ದೆನ್ನಲಾದ ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಅಧಿಕಾರಿಗಳು ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಲಿಖಿತ್ ಮತ್ತು ಚೇತನ್ ಎಂಬವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಎಸ್ಐಟಿ ಮೂಲಗಳು ಮಾಹಿತಿ ನೀಡಿವೆ.
ಈ ಆರೋಪಿಗಳ ಪೈಕಿ ಲಿಖಿತ್ ಎಂಬಾತ ಮಾಜಿ ಶಾಸಕ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಆಪ್ತ ಎನ್ನಲಾಗಿದ್ದು, ಚೇತನ್ ಸಹ ಅವರದ್ದೇ ಕಚೇರಿಯ ಸಿಬ್ಬಂದಿ ಎಂಬ ಮಾಹಿತಿ ಇದೆ. ಹೀಗಾಗಿ ಪ್ರಕರಣಕ್ಕೆ ಮಹತ್ವದ ತಿರುವು ದೊರೆತಿದೆ.
ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ ವಿಡಿಯೋಗಳನ್ನು ಹಾಸನ ಜಿಲ್ಲೆಯಲ್ಲಿ ವೈರಲ್ ಮಾಡಲಾಗುತ್ತಿದೆ ಎಂದು ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣದ ತನಿಖೆ ಎಸ್ಐಟಿಗೆ ವರ್ಗಾವಣೆಯಾಗಿತ್ತು.
ವಿಡಿಯೋ ವೈರಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಐಟಿ ಅಧಿಕಾರಿಗಳ ತಂಡ ಅಶ್ಲೀಲ ವಿಡಿಯೋಗಳನ್ನು ಹರಿಬಿಟ್ಟವರನ್ನು ವಶಕ್ಕೆ ಪಡೆಯುತ್ತಿದೆ. ಸದ್ಯ ಅಧಿಕಾರಿಗಳು ಪ್ರೀತಂ ಗೌಡ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಚೇತನ್ ಹಾಗೂ ಲಿಖಿತ್ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಹಾಸನದ ಸೈಬರ್ ಕ್ರೈಂ ಠಾಣೆಯಲ್ಲಿ ಇಬ್ಬರ ವಿಚಾರಣೆ ನಡೆಸಲಾಗುತ್ತಿದ್ದು, ನವೀನ್ ಗೌಡ ಮತ್ತು ಪುಟ್ಟರಾಜು ಎಂಬ ಮತ್ತಿಬ್ಬರು ಆರೋಪಿಗಳಿಗಾಗಿ ಹುಡುಕಾಟ ಮುಂದುವರೆದಿದೆ.
ಇದನ್ನೂ ಓದಿ: 'ಟಿಕೆಟ್ ಹಂಚಿಕೆಯಲ್ಲಿ ರಾಜ್ಯ ನಾಯಕರ ಪಾತ್ರವಿಲ್ಲ, ಹೈಕಮಾಂಡ್ ನಿರ್ಧಾರ': ಆರ್.ಅಶೋಕ್ - R Ashok