ಹುಬ್ಬಳ್ಳಿ: ಪ್ರಜ್ವಲ್ ರೇವಣ್ಣ ವಿಡಿಯೋ ತಮ್ಮದಲ್ಲ ಎಂದು ಹೇಳಲಿ. ಆಗ ನಾವು ಅದನ್ನು ಎಫ್‌ಎಸ್ಎಲ್ ಕೊಡಲು ಒತ್ತಾಯಿಸುತ್ತೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು. ನಗರದಲ್ಲಿಂದು ಮಾತನಾಡಿದ ಅವರು, ಪ್ರಜ್ವಲ್ ಬಂಧನ ಆಗಲೇಬೇಕು. ಅವರ ವಿರುದ್ಧ ಹಲವಾರು ಮಹಿಳೆಯರು ದೂರು ಕೊಟ್ಟಿದ್ದಾರೆ. ಹೀಗಾಗಿ ಸರಿಯಾದ ರೀತಿಯಲ್ಲಿ ತನಿಖೆ ಆಗಬೇಕು ಎಂದರು.
ಇನ್ನು ವಿಡಿಯೋ ಯಾರಾದರೂ ಬಿಡುಗಡೆ ಮಾಡಿರಬಹುದು. ವಿಡಿಯೋ ಬಿಡುಗಡೆ ನನ್ನ ಪ್ರಕಾರ ಚರ್ಚೆಯ ವಿಷಯವೇ ಅಲ್ಲ. ವಿಡಿಯೋ ಯಾರಿಗೆ ಸಿಕ್ಕಿದೆಯೋ ಅವರು ಬಿಡುಗಡೆ ಮಾಡಿರಬಹುದು. ಆದರೆ ಮಹಿಳೆಯರ ಜೊತೆಗೆ ಈ ರೀತಿಯಾಗಿ ನಡೆದುಕೊಂಡಿದ್ದು ಗಂಭೀರ ಅಪರಾಧ ಎಂದು ಹೇಳಿದರು.
ಹೆಚ್.ಡಿ.ರೇವಣ್ಣ ಬಂಧನದ ಕುರಿತು ಮಾತನಾಡಿ, ಕಾನೂನು ಕ್ರಮ ಕೈಗೊಳ್ಳುತ್ತಿದೆ. ದುರ್ದೈವ ರೇವಣ್ಣಗೆ ವಯಸ್ಸಾಗಿದೆ. ಅವರ ಮೇಲೆ ಸಾಕಷ್ಟು ಆರೋಪ ಕೇಳಿಬಂದಿದೆ. ಹೀಗಾಗಿ ತನಿಖೆ ಮಾಡೋದು ಒಳ್ಳೆಯದು ಎಂದರು.
ದಿಂಗಾಲೇಶ್ವರ ಶ್ರೀಗಳ ಮೇಲೆ ಎಫ್ಐಆರ್ ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಜೋಶಿ ನಸುನಕ್ಕರು.
ಬಳಿಕ, ವರ್ಗಾವಣೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿ, ಸಾಮಾನ್ಯವಾಗಿ ನಮ್ಮ ಸರ್ಕಾರ ಇದ್ದಾಗಲೇ ನಾನು ಯಾವ ಅಧಿಕಾರಿಗಳ ವರ್ಗಾವಣೆಯಲ್ಲೂ ಕೈ ಹಾಕಿಲ್ಲ. ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದಲ್ಲಿದ್ದ ಎಲ್ಲ ಅಧಿಕಾರಿಗಳನ್ನು ವರ್ಗಾಯಿಸಿದೆ. ಆದರೂ ಕೂಡಾ ಹುಬ್ಬಳ್ಳಿ-ಧಾರಾವಾಡದಲ್ಲಿ ಏನೇ ಆದರೂ ಅದಕ್ಕೆ ಪ್ರಹ್ಲಾದ್ ಜೋಶಿಯೇ ಕಾರಣ ಎಂದು ಹೇಳುತ್ತಾರೆ ಎಂದರು.
ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಿದೇಶದಿಂದ ಆಗಮನ ಸಾಧ್ಯತೆ: ವಶಕ್ಕೆ ಪಡೆಯಲು SIT ಸಿದ್ಧತೆ - Prajwal Revanna Case