ಬೆಂಗಳೂರು: ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪದಡಿ ನ್ಯಾಯಾಂಗ ಬಂಧನದಲ್ಲಿರುವ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಜಾಗೊಂಡಿದೆ.
ಎರಡನೇ ಎಫ್‌ಐಆರ್ ಕುರಿತಾಗಿ ನಿರೀಕ್ಷಣಾ ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಸಲ್ಲಿಸಿದ್ದ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ವಜಾಗೊಳಿಸಿದ್ದಾರೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ಪ್ರಜ್ವಲ್‌ಗೆ ಸೆರೆವಾಸ ಮುಂದುವರೆದಿದ್ದು, ಹೈಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ.
ಲೈಂಗಿಕ ದೌರ್ಜನ್ಯ ಆರೋಪದಡಿ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಪೈಕಿ ಎರಡನೇ ಪ್ರಕರಣದಲ್ಲಿ ಪ್ರಜ್ವಲ್ ಅವರನ್ನು ಈವರೆಗೂ ಬಂಧನ ಎಂದು ತೋರಿಸಲಾಗಿಲ್ಲ. ಹೀಗಾಗಿ ನಿರೀಕ್ಷಣಾ ಜಾಮೀನು ಕೋರಿದ್ದರು.
ಇದರೊಂದಿಗೆ ದಾಖಲಾದ ಒಟ್ಟು ನಾಲ್ಕು ಜಾಮೀನು ಅರ್ಜಿಗಳಲ್ಲಿಯೂ ಪ್ರಜ್ವಲ್‌ಗೆ ಹಿನ್ನಡೆಯಾಗಿದೆ. ಈ ಹಿಂದೆ ಮೂರು ಅರ್ಜಿಗಳನ್ನು ಸೆಷನ್ಸ್ ಕೋರ್ಟ್ ವಜಾ ಮಾಡಿತ್ತು. ಒಂದು ಜಾಮೀನು ಅರ್ಜಿ, ಎರಡು ನಿರೀಕ್ಷಣಾ ಜಾಮೀನು ಅರ್ಜಿಗಳು ವಜಾಗೊಂಡಿದ್ದವು.
ಅತ್ಯಾಚಾರ ಆರೋಪದಲ್ಲಿ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ರೇವಣ್ಣ ವಿರುದ್ಧ ಹೊಳೆನರಸೀಪುರ ನಗರ ಪೊಲೀಸ್ ಠಾಣೆಯಲ್ಲಿ ಮೊದಲ ಎಫ್‌ಐಆರ್ ದಾಖಲಾಗಿತ್ತು. ಆ ಬಳಿಕ ಸಿಐಡಿ ಠಾಣೆಗಳಲ್ಲಿ ಮತ್ತೆ ದೂರುಗಳು ದಾಖಲಾಗಿದ್ದವು.
ಇದನ್ನೂ ಓದಿ: ನಿರೀಕ್ಷಣಾ ಜಾಮೀನು ಅರ್ಜಿ ಹಿಂಪಡೆದ ಪ್ರಜ್ವಲ್ ರೇವಣ್ಣ - anticipatory bail