ಧಾರವಾಡ: ಕೇಂದ್ರ ಸಚಿವ, ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಜೋಶಿ ಅವರು ಸೋಮವಾರ ಧಾರವಾಡ ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದರು. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಜತೆಗಿದ್ದರು. ಇದಕ್ಕೂ ಮುನ್ನ ಜೋಶಿ ಬೃಹತ್ ಚುನಾವಣಾ ರ‍್ಯಾಲಿ ನಡೆಸಿದರು.
ಧಾರವಾಡದ ನಗರದ ಶಿವಾಜಿ ಮೂರ್ತಿಗೆ ಮಾಲಾರ್ಪಣೆ ಮಾಡುವ ಮೂಲಕ ರ‍್ಯಾಲಿಗೆ ಚಾಲನೆ ನೀಡಲಾಯಿತು. ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಮೆರವಣಿಗೆ ನಡೆಯಿತು. ಶಾಸಕರಾದ ಅರವಿಂದ್ ಬೆಲ್ಲದ, ಮಾಜಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ, ಮಾಜಿ ಸಚಿವ ಸಿ.ಸಿ.ಪಾಟೀಲ್, ಹಾಲಪ್ಪ ಆಚಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ನಾಮಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಹ್ಲಾದ್ ಜೋಶಿ, ''ಸಾವಿರಾರು ಜನ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರ ಅಭಿಮಾನಿಗಳ ಜೊತೆ ಬಂದು ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ನಮ್ಮ ಪಕ್ಷದ ಹಲವಾರು ನಾಯಕರು ನಮ್ಮ ಜೊತೆ ಬಂದಿದ್ದರು. ಬಸವರಾಜ ಬೊಮ್ಮಾಯಿ ಅವರು ತಮ್ಮ ನಾಮಿನೇಶನ್ ಕೂಡ ಇರುವುದರಿಂದ ಸ್ವಲ್ಪ ತಡವಾಗಿ ಬಂದಿದ್ದಾರೆ. ಇಲ್ಲಿಯವರೆಗೂ ಇಷ್ಟೊಂದು ಪ್ರಮಾಣದಲ್ಲಿ ಜನರು ನಾಮಪತ್ರ ಸಲ್ಲಿಕೆ ಮೆರವಣಿಗೆಯಲ್ಲಿ ಭಾಗವಹಿಸಿರಲಿಲ್ಲ. ಇದರ ಅರ್ಥ ಬಿಜೆಪಿಗೆ ಹಾಗೂ ನನಗೆ ಆಶೀರ್ವಾದ ಮಾಡಲು ಜನರು ನಿರ್ಧರಿಸಿದ್ದಾರೆ ಎಂಬುದಾಗಿದೆ'' ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ''ಪ್ರಹ್ಲಾದ್ ಜೋಶಿಯವರ ನಾಮಪತ್ರದಲ್ಲಿ ಭಾಗಿಯಾಗಿದ್ದೇನೆ. ಇಡೀ ರಾಜ್ಯದಲ್ಲಿ 28ಕ್ಕೆ 28 ಕ್ಷೇತ್ರಗಳಲ್ಲಿಯೂ ನಾವು ವಿಜಯಶಾಲಿಯಾಗುತ್ತೇವೆ. ಬೆಳಗಾವಿಯಲ್ಲಿ ನಿರೀಕ್ಷೆಗೂ ಮೀರಿ ಜನರು ದೊಡ್ಡ ಪ್ರಮಾಣದಲ್ಲಿ ನನ್ನನ್ನು ಸ್ವೀಕಾರ ಮಾಡುತ್ತಿದ್ದಾರೆ. ಪ್ರೀತಿ, ವಿಶ್ವಾಸ ತೋರಿಸುತ್ತಿದ್ದಾರೆ. ದೇಶದ ಸುಭದ್ರತೆಯ ದೃಷ್ಟಿಯಿಂದ ನರೇಂದ್ರ ಮೋದಿಯವರಿಗೆ ಜನರು ಆಶೀರ್ವಾದ ಮಾಡಲಿದ್ದಾರೆ'' ಎಂದರು.
ದಿಂಗಾಲೇಶ್ವರ ಶ್ರೀ ಸ್ಪರ್ಧೆ ಬಗ್ಗೆ ಗೊತ್ತಿಲ್ಲ: ''ದಿಂಗಾಲೇಶ್ವರ ಸ್ವಾಮೀಜಿಗಳ ಸ್ಪರ್ಧೆ ಬಗ್ಗೆ ನನಗೆ ಅಷ್ಟು ಗೊತ್ತಿಲ್ಲ. ನಾನು ಬೆಳಗಾವಿಯಲ್ಲಿ ಬ್ಯುಸಿಯಾಗಿದ್ದೇನೆ. ಅದರ ಬಗ್ಗೆ ಸ್ಥಳೀಯ ನಾಯಕರು ಉತ್ತರ ಕೊಡುತ್ತಾರೆ. ಸ್ವಾಮೀಜಿಗಳಿಗೆ ಫೋನ್ ಕರೆ ಮಾಡಿದ್ದೆ, ನನ್ನ ನಿರ್ಧಾರ ಅಚಲ ಎಂದು ಅವರು ಹೇಳಿದ್ದಾರೆ. ಸ್ಪರ್ಧೆ ಮಾಡಲಿ, ಆದರೆ ಜನರು ತೀರ್ಮಾನ ಮಾಡುತ್ತಾರೆ'' ಎಂದು ಹೇಳಿದರು.
''ಕುಮಾರಸ್ವಾಮಿಯವರ ಹೇಳಿಕೆಯನ್ನು ನಾನು ನೋಡಿಲ್ಲ. ಕೆಲವೊಮ್ಮೆ ಅವರ ಹೇಳಿಕೆಗಳು ಬೇರೆ ಅರ್ಥ ಕೊಡುತ್ತವೆ'' ಎಂದು ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿಕೆ ಕುರಿತಂತೆ ಶೆಟ್ಟರ್ ಪ್ರತಿಕ್ರಿಯಿಸಿದರು.
ಸ್ವಾಮೀಜಿ ಸ್ಪರ್ಧೆ ಪರಿಣಾಮ ಬೀರಲ್ಲ ಎಂದ ಬೊಮ್ಮಾಯಿ: ಜೋಶಿ ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ''ಕಳೆದ ಹದಿನೈದು ದಿನಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಊಹಾಪೋಹಗಳು ಎದ್ದಿವೆ. ಅದಕ್ಕೆಲ್ಲ ಜನರೇ ಇವತ್ತು ಉತ್ತರ ಕೊಟ್ಟಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಜೋಶಿಯವರಿಗೆ ಬೆಂಬಲ ನೀಡಿದ್ದಾರೆ. ಮತ್ತೊಮ್ಮೆ ಜೋಶಿ ಸಂಸದರಾಗಿ ಆಯ್ಕೆ ಆಗುತ್ತಾರೆ. ಅವರ ನಾಮಪತ್ರವೇ ರಾಜ್ಯದ ಚುನಾವಣಾ ಫಲಿತಾಂಶದ ದಿಕ್ಸೂಚಿ. 28ಕ್ಕೆ 28 ಕ್ಷೇತ್ರದಲ್ಲಿಯೂ ಬಿಜೆಪಿ ಗೆಲ್ಲುತ್ತದೆ. ನಿನ್ನೆ ಹೊರ ಬಂದಿರುವುದು ಕಾಂಗ್ರೆಸ್ ಸಮೀಕ್ಷೆ, ಆ ಸಮೀಕ್ಷೆಯಲ್ಲಿ ಕಾಂಗ್ರೆಸ್ಗೆ ಹೆಚ್ಚು ಸ್ಥಾನ ಬಂದಿದೆ. ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಯಾವುದೇ ಪರಿಣಾಮ ಬೀರುವುದಿಲ್ಲ'' ಎಂದು ಹೇಳಿದರು.