ಮೈಸೂರು : ಮೈಸೂರು ಚಲೋ ಸಮಾರೋಪ ಸಮಾರಂಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹಾಗೂ ಜೆಡಿಎಸ್ ಯುವ ಮುಖಂಡ ನಿಖಿಲ್ ಕುಮಾರಸ್ವಾಮಿ ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಆರ್.ಅಶೋಕ್ ಆಕ್ರೋಶ: ಇದು ಪಾದಾಯಾತ್ರೆ ಅಲ್ಲ, ಮುಡಾ ವಿರುದ್ಧದ ದಂಡಯಾತ್ರೆ. ಪಾದಯಾತ್ರೆ ಮಾಡ್ತಾ ಇರೋದು 3 ರಿಂದ 4 ಸಾವಿರ ಕೋಟಿ ಲೂಟಿ ಹೊಡೆದದ್ದು ಜನ್ರಿಗೆ ತಲುಪಬೇಕು. ಇದಕ್ಕಾಗಿ ನಾವು ಪಾದಯಾತ್ರೆ ಮಾಡ್ತಿದ್ದೇವೆ. ಬಡವರಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಸೈಟಿಲ್ಲ, ಸಿದ್ದರಾಮಯ್ಯಗೆ 14 ಸೈಟು. 25 ಸಾವಿರ ಕೋಟಿ ದಲಿತರ ಹಣ ಲೂಟಿ ಹೊಡಿತಿದ್ದಾರೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ಸಾವೇ ಫ್ರೀ. ರೈತರಿಗೆ ಸಾವೇ ಫ್ರೀ, ಬಡವರ ಹೆಸರಲ್ಲಿ ಸರ್ಕಾರ ಮಾಡಿ ಲೂಟಿ ಹೊಡೆಯುತ್ತಿದ್ದಾರೆ ಎಂದು ಪ್ರತಿಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡೋವರೆಗೂ ನಾವು ಹೋರಾಟ ನಿಲ್ಲಿಸೋಲ್ಲ. 1 ರೂಪಾಯಿಗೆ ಜಮೀನು ತಗೊಂಡಿದ್ರು, ಅವ್ರ ಬಾಮೈದ 5 ಲಕ್ಷಕ್ಕೆ ಬರೆಸಿಕೊಂಡಿದ್ರು. 1 ರೂಪಾಯಿಂದ 62 ಕೋಟಿಗೆ ಹೋಗಿದೆ. ಕ್ಲೀನ್ ಕ್ಲೀನ್ ಅಂತಾ ಹೇಳ್ತೀರಾ, ವಿಧಾನಸಭೆಯಲ್ಲಿ ಫ್ರೆಂಟ್ ಲೈನ್ನಲ್ಲಿ ಕುಳಿತು ಪ್ರಾಮಾಣಿಕ ಅಂತಾ ಹೇಳುವ ನೀವು ಸದನದಲ್ಲಿ ಉತ್ತರ ಕೊಡದೆ ಓಡಿ ಹೋಗಿದ್ರಿ. ನೀವು ಅಲ್ಲೇ ಉತ್ತರ ಕೊಟ್ಟಿದ್ರೆ, ನಾವು ಯೋಚನೆ ಮಾಡ್ತಾ ಇದ್ವಿ, ಪಾದಯಾತ್ರೆ ಮಾಡ್ಬೇಕ ಬೇಡ್ವ ಅಂತಾ. ಎಲ್ಲಿವರೆಗೂ ಸಿದ್ದರಾಮಯ್ಯ ಅವ್ರೇ ರಾಜೀನಾಮೆ ಕೊಡಲ್ಲವೋ ಅಲ್ಲಿವರೆಗೂ ನಾವು ಹೋರಾಟ ನಿಲ್ಲಿಸಲ್ಲ ಎಂದು ಅಶೋಕ್ ಹೇಳಿದರು.
ಪ್ರಲ್ಹಾದ್ ಜೋಶಿ ಹೇಳಿದ್ದು ಹೀಗೆ: ಸಿದ್ದರಾಮಯ್ಯ ಅವರೇ ನಿಮ್ಮ ಮೈತುಂಬಾ ಬರೀ ಕಪ್ಪು ಚುಕ್ಕೆ ಇವೆ.. ನೋಡಿಕೊಳ್ಳಿ. ಕಾಂಗ್ರೆಸ್ ನಡೆಸಿದ್ದು ಜನಾಂದೋಲ ಅಲ್ಲ ಧನಾಂದೋಲನ. ಸಿದ್ದರಾಮಯ್ಯ - ಡಿಕೆ ಶಿವಕುಮಾರ್ ಒಳಗಡೆ ಹೊಡೆದಾಡಿಕೊಳ್ತಾರೆ. ಹೊರಗಡೆ ನಾವು ಬಂಡೆ ಎನ್ನುತ್ತಾರೆ. 14 ಸೈಟ್ ವಾಪಸ್ ಕೊಡುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕಳ್ಳ ಮಾಲು ವಾಪಸ್ ಕೊಟ್ಟ ತಕ್ಷಣ ಎಲ್ಲಾ ಮುಗಿಯಲ್ಲ. ಕಳ್ಳತನಕ್ಕೂ ಶಿಕ್ಷೆ ಆಗಬೇಕು. ಕಾಂಗ್ರೆಸ್ ಡಿಎನ್ಎ ನಲ್ಲಿ ಭ್ರಷ್ಟಾಚಾರವಿದೆ. ದಲಿತರು, ಹಿಂದುಳಿದವರಿಗೆ ಅನ್ಯಾಯ ಮಾಡುವ ಅಂಶ ಕಾಂಗ್ರೆಸ್ ಡಿಎನ್ಎನಲ್ಲಿದೆ. ಕಾನೂನಿನ ಪ್ರಕಾರವೂ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡಿ ಅವರನ್ನು ಮನೆಗೆ ಕಳುಹಿಸುವವರೆಗೂ ನಾವು ವಿಶ್ರಮಿಸುವುದಿಲ್ಲ ಎಂದರು.
ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ: ಚುನಾವಣೆಗೋಸ್ಕರ ನಾವು ಪಾದಯಾತ್ರೆ ಮಾಡುತ್ತಿಲ್ಲ. ರಾಜ್ಯದ ಜನರನ್ನ ಜಾಗೃತಿ ಮೂಡಿಸಲಿಕ್ಕೆ ಪಾದಯಾತ್ರೆ ಮಾಡುತ್ತಿದ್ದೇವೆ. ಜೆಡಿಎಸ್ ಪಕ್ಷ ಹಾದಿಯೇ ಹುಟ್ಟು ಹೋರಾಟ. ಇಂದು ಸಂಸತ್ನಲ್ಲಿ ಕಾವೇರಿಗಾಗಿ ದೇವೇಗೌಡರು ಟೇಬಲ್ ತಟ್ಟಿ ಮಾತನಾಡುತ್ತಿರುವ ಏಕೈಕ ನಾಯಕ. ಈ ರಾಜ್ಯದಲ್ಲಿ ಮೈತ್ರಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ನೀಡಿದ್ದೀರಾ. ಬಿಜೆಪಿ, ಜೆಡಿಎಸ್ ನಾಯಕರು ಅಣ್ಣ ತಮ್ಮಂದಿರಂತೆ ಮುಂದಿನ ದಿನಗಳಲ್ಲಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ನಾಳೆಯೇ ಚುನಾವಣೆ ಬರಲಿ, ರಾಜ್ಯದ ಜನ ಕಾಂಗ್ರೆಸ್ ಪಕ್ಷವನ್ನ ತಿರಸ್ಕಾರ ಮಾಡುತ್ತಾರೆ. ಜನಾಂದೋಲನ ಹೆಸರಿನಲ್ಲಿ ಕಾಂಗ್ರೆಸ್ ಸಮಾವೇಶ ಮಾಡಿದೆ. ನಿಮ್ಮ ಹಗರಣವನ್ನ ತೊಳಿಯಲಿಕ್ಕೆ ಮೈಸೂರಿಗೆ ನಾವು ಆಗಮಿಸಿದಾಗ ವರುಣರಾಯ ಕೃಪೆ ತೋರಿದ್ದಾನೆ ಎಂದು ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಕುಟುಂಬ ದಲಿತ ಜಮೀನನ್ನು ಭೂ ಕಬಳಿಕೆ ಮಾಡಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿಕೊಂಡು ದಲಿತರ ಭೂಮಿಯನ್ನು ಸಿದ್ದರಾಮಯ್ಯ ಕುಟುಂಬ ಕಬಳಿಸಿದೆ. ವಿಧಾನಸಭಾ ಅಧಿವೇಶನದಿಂದ ಕಾಂಗ್ರೆಸ್ ಓಡಿಹೋಗಿದೆ. ಚುನಾವಣೆಗಾಗಿ ನಾವು ಪಾದಯಾತ್ರೆ ಮಾಡುತ್ತಿಲ್ಲ. ಜೆಡಿಎಸ್ - ಬಿಜೆಪಿ ಮೈತ್ರಿಯನ್ನು ಕರ್ನಾಟಕದ ಜನ ಒಪ್ಪಿದ್ದಾರೆ. ನಾನು ವಿಜಯೇಂದ್ರ ಅವರು ಅಣ್ಣ ತಮ್ಮಂದಿರ ರೀತಿಯಲ್ಲಿ ಇದ್ದೇವೆ. ನಿನ್ನೆ ಮೈಸೂರಲ್ಲಿ ಮಳೆ ಬಂದು ಕಾಂಗ್ರೆಸ್ ಜನಾಂದೋಲನದ ಪಾಪ ತೊಳೆದಿದೆ ಎಂದರು.
ಸಿದ್ದರಾಮಯ್ಯ ಅವರೇ ನೀವು ಜನತಾ ಪರಿವಾರದಲ್ಲಿ ಇದ್ದಾಗ ಸೋನಿಯಾ ಗಾಂಧಿ ಅವರ ಬಗ್ಗೆ ಏನೂ ಟೀಕೆ ಮಾಡಿದ್ರಿ ನೆನಪಿದೆಯಾ?. ಲೋಕಸಭಾ ಚುನಾವಣೆ ಸೋಲಿನಿಂದ ಡಿ.ಕೆ. ಶಿವಕುಮಾರ್ ಹತಾಶರಾಗಿದ್ದಾರೆ. ಹೆಚ್ಡಿ ದೇವೇಗೌಡರಿಗೆ ಮೊದಲು ಗೌರವ ಕೊಡುವುದನ್ನು ಕಲಿಯಿರಿ. ನೈತಿಕತೆ ಹೊಣೆ ಹೊತ್ತು ಸಿದ್ದರಾಮಯ್ಯ ರಾಜೀನಾಮೆ ನೀಡಲಿ. ಇಲ್ಲವೆ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ನೂರಕ್ಕೆ ನೂರರಷ್ಟು ಸಿದ್ದರಾಮಯ್ಯ ತಲೆದಂಡ ಖಚಿತ. ನಮ್ಮ ಹೋರಾಟ ಇಲ್ಲಿಗೆ ನಿಲ್ಲಲ್ಲ. ನಿಮ್ಮ ತಲೆದಂಡ ಆಗೇ ಆಗುತ್ತದೆ. ಅಲ್ಲಿಯ ತನಕ ನಮ್ಮ ಹೋರಾಟ ಮುಂದುವರೆಯುತ್ತದೆ ಎಂದು ಸಮಾವೇಶದಲ್ಲಿ ನಿಖಿಲ್ ಕುಮಾರಸ್ವಾಮಿ ಹೇಳಿದರು.
ಓದಿ: ಲೂಟಿ ಮಾಡುವ ಡಿ.ಕೆ. ಶಿವಕುಮಾರ್ಗೆ ನಾನು ನಾಗರ ಹಾವು ಇದ್ದ ಹಾಗೆ: ಹೆಚ್.ಡಿ. ಕುಮಾರಸ್ವಾಮಿ - H D Kumaraswamy