ದಾವಣಗೆರೆ: ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ಅದ್ಧೂರಿಯಾಗಿ ರೋಡ್ ಶೋ ನಡೆಸಿ ಮತಬೇಟೆ ಮಾಡಿದರು.
ನಗರದ ಶಾಮನೂರು ಆಂಜನೇಯ, ನಿಟುವಳ್ಳಿ ಬಡಾವಣೆಯ, ಶ್ರೀ ದುರ್ಗಾಂಭಿಕಾ ದೇವಿ ಹಾಗು ಹಳೇ ದಾವಣಗೆರೆಯಲ್ಲಿರುವ ದುಗ್ಗಮ್ಮ ದೇವಿಗೆ ಪೂಜೆ ಸಲ್ಲಿಸಿ ರೋಡ್ ಶೋ ಆರಂಭಿಸಿದರು. ದಾವಣಗೆರೆ ದಕ್ಷಿಣ ಮತ ಕ್ಷೇತ್ರದಿಂದ ಒಂದು ರ್ಯಾಲಿ ಹಾಗು ದಾವಣಗೆರೆ ಉತ್ತರ ಮತ ಕ್ಷೇತ್ರದಿಂದ ಮತ್ತೊಂದು ರ್ಯಾಲಿ ಸೇರಿದಂತೆ ಒಟ್ಟು ಎರಡು ಕಡೆಯಿಂದ ಚುನಾವಣೆ ರ್ಯಾಲಿ ನಡೆಸಲಾಯಿತು. ಎರಡು ಮೆರವಣಿಗೆಯಲ್ಲಿ ಇಪ್ಪತ್ತೈದು ಸಾವಿರ ಜನ ಸೇರಿದ್ದರು. ಈ ವೇಳೆ ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್, ಹೊನ್ನಾಳಿ ಶಾಸಕ ಡಿ.ಜಿ ಶಾಂತನಗೌಡ, ಮಾಯಕೊಂಡ ಶಾಸಕ ಬಸವಂತಪ್ಪ, ಹಾಗೂ ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ್ ಸಾಥ್ ನೀಡಿದರು.
ಇಂದು ನಡೆದ ಅದ್ಧೂರಿ ರೋಡ್ ಶೋನಲ್ಲಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಪುತ್ರ ಸಮರ್ಥ್ ಶಾಮನೂರು, ಪುತ್ರಿ ಶ್ರೇಷ್ಠ ಶಾಮನೂರು ಭಾಗಿಯಾಗಿ ತಾಯಿ ಪರ ಮತಯಾಚಿಸಿದರು.
ಬಳಿಕ ಡಾ.ಪ್ರಭಾ ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, "ಜನ ಈ ಬಾರಿ ನಮ್ಮ ಪರ ಇದ್ದಾರೆ. ಈಗಿರುವ ನಮ್ಮ ಕಾರ್ಯಕರ್ತರ ಹುರುಪು ಮೇ ಏಳನೇ ತಾರೀಕಿನವರೆಗೆ ಹೀಗೇ ಇರಲಿ, ನಮ್ಮ ಕಾರ್ಯಕರ್ತರು ಹುಮ್ಮಸ್ಸಿನಿಂದ ಜನರ ಬಳಿ ತೆರಳಿ ಮತಯಾಚನೆ ಮಾಡುತ್ತಿದ್ದಾರೆ. ನನಗೂ ಒಂದು ಅವಕಾಶ ಮಾಡಿಕೊಡಿ" ಎಂದು ಮತದಾರರಲ್ಲಿ ಮನವಿ ಮಾಡಿದರು"
ಈ ರೋಡ್ ಶೋನಲ್ಲಿ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಭಾಗಿಯಾಗಿ ತಮ್ಮ ಸೊಸೆ ಪರ ಮತಯಾಚನೆ ಮಾಡಿದರು. ಪತಿ ಸಚಿವ ಎಸ್ಎಸ್ ಮಲ್ಲಿಕಾರ್ಜುನ್ ಕೂಡ ರಸ್ತೆಯುದ್ದಕ್ಕೂ ಪತ್ನಿ ಪರ ಮತಯಾಚಿಸಿದರು.
ಇದನ್ನೂ ಓದಿ: 2ನೇ ಸಲ ನಾಮಪತ್ರ ಸಲ್ಲಿಸಿ 'ಕೆಲಸ ನೋಡಿ ಮತದಾರರು ಕೈ ಹಿಡಿಯುತ್ತಾರೆ' ಎಂದ ಬಿ.ವೈ.ರಾಘವೇಂದ್ರ - B Y Raghavendra