ಮೈಸೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ 2024ರ ಮತದಾನವನ್ನು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಏ.26ರಂದು ಜಿಲ್ಲೆಯಲ್ಲಿ ನಡೆಯುವ ಎಲ್ಲ ರೀತಿಯ ಜಾತ್ರೆ, ಸಂತೆ, ಉತ್ಸವಗಳನ್ನು ಮುಂದೂಡಿಸಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ ಡಾ. ರಾಜೇಂದ್ರ ಕೆ ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮದ್ಯ ಮಾರಾಟ ನಿಷೇಧ: ಲೋಕಸಭಾ ಸಾರ್ವತ್ರಿಕ ಚುನಾವಣೆ -2024ರ ಸಂಬಂಧ ಚುನಾವಣೆಯು ಸುಸೂತ್ರವಾಗಿ ನಡೆಸಲು ಹಾಗೂ ಶಾಂತಿಯುತವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ಮತದಾನದ ನಿಮಿತ್ತ ಏ.24 ರಂದು ಸಂಜೆ 5 ಗಂಟೆಯಿಂದ ಏ. 26 ರ ಮಧ್ಯರಾತ್ರಿ 12 ಗಂಟೆಯವರೆಗೆ ಮತ್ತು ಮೈಸೂರು ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ಅಂಗವಾಗಿ ಜೂನ್.03 ರಂದು ಮಧ್ಯರಾತ್ರಿ 12 ಗಂಟೆಯಿಂದ ಜೂನ್.4 ರ ಮಧ್ಯರಾತ್ರಿ 12 ಗಂಟೆಯವರೆಗೆ ಮೈಸೂರು ನಗರ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿಯಿಂದ 05 ಕಿ. ಮೀ ವ್ಯಾಪ್ತಿಯಲ್ಲಿನ ಎಲ್ಲ ವಿಧದ ಮದ್ಯದಂಗಡಿಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸ(ಡ್ರೈ ಡೇಸ್) ಗಳೆಂದು ಘೋಷಿಸಲಾಗಿದೆ.
ಎಲ್ಲ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿಸಿ ಮೊಹರು ಮಾಡಿ, ಅದರ ಕೀ ಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸಬೇಕಾಗಿ ಮೈಸೂರು ನಗರ ಮತ್ತು ಮೈಸೂರು ಗ್ರಾಮಾಂತರದ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ದಂಡಾಧಿಕಾರಿಯಾದ ಡಾ. ರಾಜೇಂದ್ರ ಕೆ. ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಸಾಸ್ತ್ರ ಸ್ಫೋಟಕ ವಸ್ತುಗಳು ಹಾಗೂ ಮಾರಕಾಸ್ತ್ರಗಳ ಬಳಕೆ ನಿಷೇಧ: ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಮಾ. 16 ರಿಂದ ಜೂ.06 ರವರೆಗೆ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಬಂದೂಕನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ತೀರ್ಮಾನಿಸಲಾದ ಅರ್ಜಿದಾರರನ್ನು ಹೊರತುಪಡಿಸಿ, ಯಾವುದೇ ವ್ಯಕ್ತಿಗಳು ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಒಯ್ಯುವ, ಅಥವಾ ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಎಲ್ಲ ಸ್ವರೂಪದ ಆಯುಧ ರಹದಾರಿ ಹೊಂದಿರುವವರು ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಡಿಪಾಸಿಟ್ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾದಂಡಾಧಿಕಾರಿಗಳಾದ ಡಾ. ರಾಜೇಂದ್ರ ಕೆ ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಮೈಸೂರು: ಅವೈಜ್ಞಾನಿಕ ಹಂಪ್‌ಗಳಿಂದ ಅಪಘಾತ, ಅಧಿಕಾರಿಗಳ ವಿರುದ್ಧ ಡಿಸಿ ಗರಂ