ಬೆಂಗಳೂರು: ಪಟ್ಟಣಗೆರೆ ಶೆಡ್ನಲ್ಲಿ ರೇಣುಕಾಸ್ವಾಮಿ ಹತ್ಯೆಗೈದ ಆರೋಪಿಗಳು ಕೃತ್ಯವನ್ನು ಮಾರೆಮಾಚಲು ಕಾರಿನಲ್ಲಿ ಶವ ಸಾಗಿಸಿ ಸುಮನಹಳ್ಳಿ ಬ್ರಿಡ್ಜ್ ಬಳಿಯ ರಾಜಕಾಲುವೆಗೆ ಎಸೆದಿದ್ದರು. ತನಿಖೆಯಲ್ಲಿ ಶವ ವಿಲೇವಾರಿ ಮಾಡಲು ಬಳಸಿದ ಮಾರ್ಗ, ಶವ ಎಸೆದ ಜಾಗ ಸೇರಿದಂತೆ ಇವೆಲ್ಲದರ ಬಗ್ಗೆ ಸಮಗ್ರ ಬ್ಲೂ ಪ್ರಿಂಟ್ ರಚಿಸಿಕೊಡಲು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದು ಪೊಲೀಸರು ಮನವಿ ಮಾಡಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಏಳು ಮಂದಿ ಆರೋಪಿಗಳು ಬಳಸುತ್ತಿದ್ದ ಸಿಮ್ಗಳು ಬೇರೆಯವರ ಹೆಸರಿನಲ್ಲಿದ್ದು, ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಮುಂದಾಗಿದ್ದಾರೆ.
ದರ್ಶನ್ ಉಪಯೋಗಿಸುತ್ತಿದ್ದ ಮೊಬೈಲ್ ಸಿಮ್ ಹೇಮಂತ್ ಹೆಸರಿನಲ್ಲಿದ್ದರೆ, ಪವಿತ್ರಾ ಬಳಸುತ್ತಿದ್ದ ಸಿಮ್ ಮನೋಜ್ ಎಂಬವರ ಹೆಸರಿನಲ್ಲಿದೆ. ನಂದೀಶ್, ಪ್ರದೂಷ್, ಕಾರ್ತಿಕ್, ಕೇಶವಮೂರ್ತಿ ಹಾಗೂ ನಿಖಿಲ್ ನಾಯಕ್ ಬೇರೆಯವರ ಹೆಸರಿನಲ್ಲಿ ಸಿಮ್ ಖರೀದಿಸಿ ಬಳಸುತ್ತಿದ್ದರು. ಸಿಮ್ ಹೆಸರಿನಲ್ಲಿರುವ ಮಾಲೀಕರಿಗೆ ನೋಟಿಸ್ ನೀಡಿ ವಿಚಾರಣೆಗೆ ಪೊಲೀಸರು ನೋಟಿಸ್ ಜಾರಿ ಮಾಡಲಿದ್ದಾರೆ.
ಕೃತ್ಯದ ಸಂದರ್ಭಗಳಲ್ಲಿ ದರ್ಶನ್ ಹಾಗೂ ಪವಿತ್ರಾ ಬಳಸಿದ್ದ ಮೊಬೈಲ್ ಫೋನ್ಗಳಲ್ಲಿರುವ ಡೇಟಾ ರಿಟ್ರೀವ್ ಮಾಡಲು ಹೈದರಾಬಾದ್ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಘಟನಾ ಸ್ಥಳದಲ್ಲಿ ಸಿಕ್ಕಿರುವ ಬೆರಳಮುದ್ರೆಗಳಿಗೂ ಆರೋಪಿಗಳಿಂದ ಸಂಗ್ರಹಿಸಲಾಗಿರುವ ಫಿಂಗರ್ ಪ್ರಿಂಟ್ಗಳು ತಾಳೆಯಾಗುತ್ತದೆಯೇ ಎಂಬುದನ್ನು ಅರಿಯಲು ನಗರ ಫಿಂಗರ್ ಪ್ರಿಂಟ್ ವಿಭಾಗಕ್ಕೆ ಪೊಲೀಸರು ಪತ್ರ ಬರೆದಿದ್ದಾರೆ.
ವಿಚಾರಣೆಗೆ ಹಾಜರಾದ ಡೆವಿಲ್ ಚಿತ್ರದ ನಿರ್ದೇಶಕ: ಡೆವಿಲ್ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಮಿಲನಾ ಪ್ರಕಾಶ್ ಅವರಿಗೆ ನೋಟಿಸ್ ನೀಡಿ ವಿಚಾರಣೆಗೆ ಕರೆಯಿಸಿಕೊಳ್ಳಲಾಗಿದೆ. ಬಸವೇಶ್ವರ ನಗರದಲ್ಲಿರುವ ಎಸಿಪಿ ಚಂದನ್ ಕುಮಾರ್ ಕಚೇರಿಗೆ ಪ್ರಕಾಶ್ ವಿಚಾರಣೆಗೆ ಹಾಜರಾಗಿದ್ದಾರೆ. ಡೆವಿಲ್ ಸಿನಿಮಾದಲ್ಲಿ ನಾಯಕ ನಟನಾಗಿ ದರ್ಶನ್ ಅಭಿನಯಿಸುತ್ತಿದ್ದರು. ರೇಣುಕಾಸ್ವಾಮಿ ಕೊಲೆಯ ನಂತರ ಡೆವಿಲ್ ಸಿನಿಮಾದಲ್ಲಿ ನಟನೆ ಮಾಡಲು ಮೈಸೂರಿಗೆ ದರ್ಶನ್ ತೆರಳಿದ್ದರು. ಅಂದು ಶೂಟಿಂಗ್ಗೆ ಎಷ್ಟು ಗಂಟೆಗೆ ಬಂದಿದ್ರು? ಎಷ್ಟು ಸಮಯ ಅವರು ಅಲ್ಲಿದ್ದರು. ಬೇರೆ ಏನಾದರೂ ವಿಷಯವನ್ನು ಪ್ರಸ್ತಾಪ ಮಾಡಿದ್ರಾ? ಅನ್ನೋದರ ಬಗ್ಗೆ ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಇದನ್ನೂ ಓದಿ: ದರ್ಶನ್, ಪವಿತ್ರಾ ಗೌಡ ಆಪ್ತರ ವಿಚಾರಣೆಗೆ ಮುಂದಾದ ಪೊಲೀಸರು - Renukaswamy Murder Case