ದಾವಣಗೆರೆ: ಜಿಲ್ಲೆಯಲ್ಲಿ ಕಳ್ಳತನವಾಗಿದ್ದ ಲಕ್ಷಾಂತರ ಮೌಲ್ಯದ ಕೃಷಿ ಯಂತ್ರೋಪಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ, ಕಳ್ಳತನ ಮಾಡಿದ್ದ ಮೂವರು ಅಪ್ರಾಪ್ತ ಬಾಲಕರನ್ನು ಸರ್ಕಾರಿ ಪರಿವೀಕ್ಷಣಾಲಯಕ್ಕೆ ಒಪ್ಪಿಸಿದ್ದಾರೆ.
ಏಪ್ರಿಲ್ 06 ರಾತ್ರಿ ದಾವಣಗೆರೆ ತಾಲೂಕಿನ ಶಿವಪುರ ಗ್ರಾಮದ ಶೇಖರ್ ನಾಯ್ಕ ಎಂಬುವರ ಮನೆಯ ಬಳಿ ನಿಲ್ಲಿಸಿದ್ದ 40 ಸಾವಿರ ಮೌಲ್ಯದ ಒಂದು ಸ್ಲಾಚರ್, 50 ಸಾವಿರ ಮೌಲ್ಯದ ಕೃಷಿ ಉಪಕರಣ ಕಳ್ಳತನವಾಗಿತ್ತು. ಈ ಕುರಿತು ಪತ್ತೆ ಹಚ್ಚಿಕೊಡುವಂತೆ ಶೇಖರ್ ನಾಯ್ಕ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರು ಮೂವರು ಅಪ್ರಾಪ್ತ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದ್ದಾರೆ. ಈ ವೇಳೆ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರು ಕಡೆ ಹಾಗೂ ಮಾಯಕೊಂಡ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮೂರು ಕಡೆ ಈ ಕೃತ್ಯ ಎಸೆಗಿರುವುದು ತಿಳಿದುಬಂದಿದೆ.
ಒಟ್ಟು ಸುಮಾರು 03 ಟ್ರಾಲಿ, 03 ರೂಟವೇಟರ್, 01 ಫ್ಲ್ಯಾಶರ್ ಸೇರಿದಂತೆ 15 ಲಕ್ಷ ಮೌಲ್ಯದ ಕೃಷಿ ಉಪಕರಣಗಳ ಜತೆ ಕೃತ್ಯಕ್ಕೆ ಬಳಸಿದ್ದ ಟ್ರ್ಯಾಕ್ಟರ್ ಇಂಜಿನ್‌ನನ್ನು ವಶಕ್ಕೆ ಪಡೆದ ಪೊಲೀಸರು ಬಾಲಕರನ್ನು ಸರ್ಕಾರಿ ಪರಿವೀಕ್ಷಣಾಲಯಕ್ಕೆ ಒಪ್ಪಿಸಿದ್ದಾರೆ. ಸದರಿ ವಸ್ತುಗಳು ಮತ್ತು ಕೃತ್ಯವೆಸಗಿದವರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಎಸ್ಪಿ ಉಮಾ ಪ್ರಶಾಂತ್ ಶ್ಲಾಘಿಸಿದ್ದಾರೆ.
ಪ್ರತ್ಯೇಕ ಪ್ರಕರಣ;
ಸ್ನೇಹಿತನನ್ನೇ ಕೊಂದ ಯುವಕ: ದಾವಣಗೆರೆಯ ಒಬಜ್ಜಿಹಳ್ಳಿ ಗ್ರಾಮದಲ್ಲಿ ನಡೆದಿದ್ದ ಯುವಕನ ಭೀಕರ ಕೊಲೆ ಪ್ರಕರಣ ಸಂಬಂಧ ಆರೋಪಿಯನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಆರೋಪಿಯು ಹಣಕಾಸಿನ ವಿಚಾರಕ್ಕೆ ತನ್ನ ಸ್ನೇಹಿತನನ್ನೇ ಕೊಲೆ ಮಾಡಿರುವುದು ತನಿಖೆಯಲ್ಲಿ ಬಹಿರಂಗವಾಗಿದೆ.
ಸುದೀಪ್ ಆರ್. (22) ಕೊಲೆಯಾದ ಯುವಕ ಹಾಗೂ ಮನೋಹರ್ ಪಿ. (25) ಆರೋಪಿ. ಮೇ 16 ರಂದು ದಾವಣಗೆರೆ ತಾಲೂಕಿನ ಒಬಜ್ಜಿಹಳ್ಳಿ ಗ್ರಾಮದಲ್ಲಿ ಮಾರಕಾಸ್ತ್ರದಿಂದ ಹಲ್ಲೆ ಮಾಡಿ ಸುದೀಪ್ ಕೊಲೆ ನಡೆದಿತ್ತು. ಪ್ರಕರಣ ಸಂಬಂಧ ಸುದೀಪ್ ಪತ್ನಿ ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಈ ಬಗ್ಗೆ ದೂರು ದಾಖಲಿಸಿಕೊಂಡ ಗ್ರಾಮಾಂತರ ಠಾಣೆ ಪೊಲೀಸರು ತನಿಖೆಗೆ ತಂಡ ರಚಿಸಿ, ಕೊಲೆ ನಡೆದ ಕೇವಲ 48 ಗಂಟೆಗಳಲ್ಲೇ ಆರೋಪಿ ಮನೋಹರ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದಾವಣಗೆರೆಯ ಎಸ್.ಪಿ.ಎಸ್. ನಗರದ ನಿವಾಸಿಯಾದ ಮನೋಹರ್ ಹಣದ ವಿಚಾರದಲ್ಲಿ ಕೊಲೆ ಮಾಡಿರುವುದಾಗಿ ತನಿಖೆ ವೇಳೆ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣ ಬೇಧಿಸುವಲ್ಲಿ ಯಶಸ್ವಿಯಾದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ಅವರು ಶ್ಲಾಘಿಸಿದ್ದಾರೆ.