ಬೆಂಗಳೂರು: ದೀಪಾವಳಿ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಹಸಿರು ಪಟಾಕಿ ಹೊರತುಪಡಿಸಿದ ಇತರೆ ಮಾಲಿನ್ಯಕಾರಕ ಪಟಾಕಿಗಳ ಮಾರಾಟದ ಕುರಿತ ಆನ್‌ಲೈನ್ ಜಾಹೀರಾತುಗಳ ಮೇಲೆ ನಗರದ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.
ಇತರ ಮಾಲಿನ್ಯಕಾರಕ ಪಟಾಕಿಗಳು ಸೇರಿದಂತೆ ಎಲ್ಲ ವಿಧದ ಪಟಾಕಿಗಳು ಲಭ್ಯ ಇರುವುದಾಗಿ ಆನ್‌ಲೈನ್‌ನಲ್ಲಿ ಜಾಹಿರಾತು ಪ್ರಕಟಿಸಿದ್ದ ಆರೋಪದ ಮೇಲೆ ಶಿವಾನಂದ ಸ್ಟೋರ್ಸ್ ವಿರುದ್ಧ ಬಂಡೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ 287 (ಬೆಂಕಿ ಮತ್ತು ದಹನಕಾರಿ ವಸ್ತುಗಳನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳ ಅನುಸಾರ ಅಕ್ಟೋಬರ್ 31ರಿಂದ ನವೆಂಬರ್ 2ರವರೆಗೂ ಬೆಳಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆಯವರೆಗೂ ಕೇವಲ ಹಸಿರು ಪಟಾಕಿಗಳನ್ನು ಸಿಡಿಸಲು ಅನುಮತಿಯಿದೆ. ಅಲ್ಲದೇ, ಹಸಿರು ಪಟಾಕಿಗಳಲ್ಲದ ಇತರ ಮಾಲಿನ್ಯಕಾರಕ ಪಟಾಕಿಗಳ ತಯಾರಿ ಹಾಗೂ ಸಂಗ್ರಹಣೆಗೆ ರಾಜ್ಯಾದ್ಯಂತ ನಿಷೇಧ ವಿಧಿಸಲಾಗಿದೆ. ಅದಾಗ್ಯೂ ಸಹ ಹಸಿರು ಪಟಾಕಿಗಳನ್ನು ಹೊರತುಪಡಿಸಿ ಇತರ ಪಟಾಕಿಗಳ ತಯಾರಿ, ಸಂಗ್ರಹ ಅಥವಾ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ: ರಾತ್ರಿ 8 ರಿಂದ 10 ಗಂಟೆಯವರೆಗೆ ಮಾತ್ರ ಪಟಾಕಿ ಸಿಡಿಸಬೇಕು: ಸಚಿವ ಈಶ್ವರ ಖಂಡ್ರೆ
ಆದರೆ, ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಸಂದರ್ಭದಲ್ಲಿ ಅನೇಕ ಮಾರಾಟಗಾರರು ಆನ್‌ಲೈನ್ ವೇದಿಕೆಗಳ ಮೂಲಕ ಎಲ್ಲ ವಿಧದ ಪಟಾಕಿಗಳ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಹೀಗಾಗಿ, ಬೆಂಗಳೂರು ಪೊಲೀಸರು ವಿಶೇಷ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಚಿಕ್ಕೋಡಿ: ಸಿನಿಮೀಯ ಶೈಲಿಯಲ್ಲಿ ನಸುಕಿನ ಜಾವ ಕಳ್ಳರನ್ನು ಹಿಡಿದ ಗ್ರಾಮಸ್ಥರು