ಮಂಡ್ಯ: ಇಲ್ಲಿಯ ಕೆರಗೋಡು ಗ್ರಾಮದಲ್ಲಿ ಹನುಮಧ್ವಜ ತೆರವು ಮಾಡಿದ್ದನ್ನು ವಿರೋಧಿಸಿ ಪ್ರತಿಭಟನೆ ಮಾಡಿದ ಬಿಜೆಪಿ, ಜೆಡಿಎಸ್ ನಾಯಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಭಾನುವಾರ ಕೆರಗೋಡು ಗ್ರಾಮದಲ್ಲಿ ಧ್ವಜ ತೆರವು ಸಂಬಂಧ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಇದೇ 22ರಂದು ನಡೆದ ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ದಿನದಂದೇ ಗ್ರಾಮದಲ್ಲಿ ಹನುಮಧ್ವಜ ಹಾರಿಸಲಾಗಿತ್ತು. ಈ ಸಂಬಂಧ ಗ್ರಾಮ ಪಂಚಾಯಿತಿಯಲ್ಲೂ ಅನುಮತಿ ಪಡೆದುಕೊಳ್ಳಲಾಗಿತ್ತು. ಇಂದು ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್ ಮೂಲಕ ಧ್ವಜವನ್ನು ತೆರವು ಮಾಡಿದೆ.
ಇದನ್ನು ವಿರೋಧಿಸಿ ಬಿಜೆಪಿ, ಜೆಡಿಎಸ್ ನಾಯಕರು ಹಿಂದೂ ಕಾರ್ಯಕರ್ತರೊಡಗೂಡಿ ಪ್ರತಿಭಟನೆ ನಡೆಸಿದರಲ್ಲದೆ ಧ್ವಜತೆರವು ಮಾಡಲು ಅವಕಾಶ ಮಾಡಿಕೊಡಲಿಲ್ಲ. ಆದರೂ ಪೊಲೀಸ್ ಬಂದೋಬಸ್ತ್ ಮೂಲಕ ಹನುಮಧ್ವಜವನ್ನು ಕೆಳಗಿಳಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು. ಈ ವೇಳೆ ಪ್ರತಿಭಟನಾಕಾರರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ನಂತರ ಧ್ವಜವನ್ನ ಪ್ರತಿಭಟನಾಕಾರರು ತಮ್ಮ ವಶಕ್ಕೆ ಪಡೆದರು.
ಈ ವೇಳೆ ಉದ್ವಿಗ್ನಗೊಂಡ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ನೂಕಾಟ ತಳ್ಳಾಟ ನಡೆದಿದೆ. ಅಲ್ಲದೆ ಧ್ವಜದ ಕಂಬದಲ್ಲಿ ರಾಷ್ಟ್ರ ಧ್ವಜ ಹಾರಿಸುವುದಾಗಿ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಎಷ್ಟೇ ಪ್ರಯತ್ನಪಟ್ಟರೂ ಪ್ರಯೋಜನವಾಗಲಿಲ್ಲ. ಆಗ ಪೊಲೀಸರು ಲಾಠಿ ಜಾರ್ಜ್ ಮಾಡುವ ಮೂಲಕ ಉದ್ರಿಕ್ತರನ್ನು ಚದುರಿಸಿ ರಾಷ್ಟ್ರಧ್ವಜ ಹಾರಿಸಿದ್ದಾರೆ.
ಲಾಠಿ ಚಾರ್ಜ್ ಆಗುತ್ತಿದ್ದಂತೆ ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಕೆಲ ಸಮಯ ಬಿಟ್ಟು ಮತ್ತೆ ಆಗಮಿಸಿದ ಪ್ರತಿಭಟನಾಕಾರರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಮತ್ತೊಂದೆಡೆ ವಿಪಕ್ಷ ನಾಯಕ ಆರ್. ಅಶೋಕ್ ಸ್ಥಳಕ್ಕೆ ಬರುತ್ತಿದ್ದಂತೆ ಪ್ರತಿಭಟನಾಕಾರರು ಸರ್ಕಾರ, ಸ್ಥಳಿಯ ಶಾಸಕರು, ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ದ ಆಕ್ರೋಶ ಹೊರ ಹಾಕಿದ್ದಾರೆ. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್, ಅಶೋಕ್, ಮಾಜಿ ಸಚಿವ ಅಶ್ವತ್ಥ ನಾರಾಯಣ್ ರಾಜ್ಯ ಸರ್ಕಾರದ ಹಿಂದೂ ಧೋರಣೆಯನ್ನು ಖಂಡಿಸುತ್ತೇವೆ ಎಂದು ಕಿಡಿಕಾರಿದ್ದಾರೆ.
ನಂತರ ಆರ್. ಅಶೋಕ್ ನೇತೃತ್ವದಲ್ಲಿ ಬಿಜೆಪಿ-ಜೆಡಿಎಸ್ ಹಾಗೂ ಹಿಂದೂ ಕಾರ್ಯಕರ್ತರು ತಂಡೋಪತಂಡವಾಗಿ ವಿವಾದಿತ ಧ್ವಜ ಸ್ತಂಭದ ಬಳಿ ನುಗ್ಗಲು ಪ್ರಯತ್ನಿಸಿದ್ದಾರೆ. ಪರಿಸ್ಥಿತಿ ಕೈ ಮೀರೋದನ್ನು ಅರಿತ ಪೊಲೀಸರು ಮತ್ತೆ ಲಾಠಿ ಚಾರ್ಜ್ ಮೂಲಕ ಕಾರ್ಯಕರ್ತರನ್ನ ಚದುರಿಸಿ ಬಿಜೆಪಿ - ಜೆಡಿಎಸ್ ನಾಯಕರನ್ನು ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಪ್ರತಿಭಟನೆಗೆ ಬಿಜೆಪಿ ಕರೆ: ನಾಳೆ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಬಿಜೆಪಿಯಿಂದ ಪ್ರತಿಭಟನೆಗೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಕರೆ ನೀಡಿದ್ದಾರೆ. ಈ ನಡುವೆ ಸ್ಥಳೀಯ ಮುಖಂಡರು ಕೂಡ ವಿವಾದಿತ ಕೆರಗೋಡು ಗ್ರಾಮದಿಂದ ಮಂಡ್ಯ ಡಿಸಿ ಕಚೇರಿವರೆಗೆ ಬೃಹತ್ ಪಾದಯಾತ್ರೆಗೆ ಕರೆ ಕೊಟ್ಟಿದ್ದಾರೆ. ನಾಳೆ ನಡೆಯುವ ಡಿಸಿ ಕಚೇರಿ ಮುತ್ತಿಗೆ ಚಳವಳಿಯಲ್ಲಿ ರಾಜ್ಯದ ಪ್ರಮುಖ ಬಿಜೆಪಿ ಹಾಗೂ ಹಿಂದೂ ನಾಯಕರು ಪಾಲ್ಗೊಳ್ಳಲಿದ್ದಾರೆ. ಸದ್ಯ ಕೆರಗೋಡು ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿಯಿದ್ದು, ಬಿಗಿ ಬಂದೋಬಸ್ತ್ ಮಾಡಲಾಗಿದೆ.
ಇದನ್ನೂ ಓದಿ: ಹನುಮಧ್ವಜಕ್ಕೆ ಅಪಮಾನ: ನಾಳೆ ಎಲ್ಲ ಜಿಲ್ಲೆಗಳಲ್ಲಿ ಬಿಜೆಪಿ ಪ್ರತಿಭಟನೆ