ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಪ್ರಯಾಣಿಕರ ಮೇಲೆ ಕ್ಷುಲ್ಲಕ ಕಾರಣಕ್ಕೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ಏರುತ್ತಿತ್ತು, ಆಟೋ ಚಾಲಕರ ವಿರುದ್ಧ ಸಂಚಾರ ಪೊಲೀಸರು ಕಾರ್ಯಾಚರಣೆ ಬಿಗಿಗೊಳಿಸಿದ್ದಾರೆ.
ನಗರದಲ್ಲಿ ಕಳೆದ 9 ತಿಂಗಳಲ್ಲಿ ಆಟೋ ಚಾಲಕರ ವಿರುದ್ಧ ಸಂಚಾರ ಪೊಲೀಸರು 6,137 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಯಾಣಿಕರು ಕರೆದ ಸ್ಥಳಕ್ಕೆ ಬರದೇ ಇರುವುದು, ಹೆಚ್ಚಿನ ಬಾಡಿಗೆಗೆ ಬೇಡಿಕೆ, ಪ್ರಯಾಣಿಕರನ್ನು ಕರೆದೊಯ್ದು ಸುಲಿಗೆ ಮಾಡುವ ಪ್ರಕರಣಗಳು ಅಧಿಕವಾಗುತ್ತಿವೆ. ಅಲ್ಲದೇ ಮೆಟ್ರೊ ಹಾಗೂ ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರನ್ನು ಅಡ್ಡಗಟ್ಟಿ ಕಿರುಕುಳ ನೀಡುತ್ತಿರುವ ಕುರಿತು ದೂರುಗಳ ಸಂಖ್ಯೆ ಅಧಿಕವಾಗಿದೆ ಎಂದು ಸಂಚಾರ ಪೊಲೀಸರು ತಿಳಿಸಿದ್ದಾರೆ.
ಸೆ.19ರ ರಾತ್ರಿ ಪ್ರಯಾಣಿಕರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆಟೋ ಚಾಲಕ ಸೇರಿ ಇಬ್ಬರನ್ನು ಗೋವಿಂದರಾಜನಗರ ಠಾಣೆ ಪೊಲೀಸರು ಬಂಧಿಸಿದ್ದರು. ಆಟೋ ಚಾಲಕ ಶಿವಕುಮಾರ್ ಹಾಗೂ ಮಂಟೇಪ್ಪ ಬಂಧಿತ ಸುಲಿಗೆಕೋರರು. ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ದೂರುದಾರ ರಾಮಕೃಷ್ಣ ಎಂಬವರು ನೀಡಿದ ದೂರಿನ ಮೇರೆಗೆ ಇಬ್ಬರನ್ನು ಬಂಧಿಸಲಾಗಿತ್ತು. ಆರೋಪಿ ಶಿವಕುಮಾರ್, ಮಂಟೇಪ್ಪ ಎಂಬ ಆರೋಪಿಗಳು ಸೆ.19ರಂದು ವ್ಯಕ್ತಿಯೋರ್ವನನ್ನು ಆಟೋ ಹತ್ತಿಸಿ ಚಾಕು ತೋರಿಸಿ ಸುಲಿಗೆ ಮಾಡಿದ್ದರು.
ಆದೇ ರೀತಿ ಇತ್ತೀಚೆಗೆ ಮೈಕೋ ಲೇಔಟ್ ಸಂಚಾರ ಠಾಣಾ ವ್ಯಾಪ್ತಿಯಲ್ಲಿ ಚೆನ್ನೈನಿಂದ ಸಿಲ್ಕ್ ಬೋರ್ಡ್ಗೆ ಬಂದಿದ್ದ ಯುವತಿಯನ್ನು ಆಟೋ ಹತ್ತಿಸಿ ದುಪ್ಪಟ್ಟು ಹಣ ನೀಡುವಂತೆ ಚಾಲಕ ಸಂತೋಷ್ ಒತ್ತಾಯಿಸಿದ್ದ. ಹೆಚ್ಚಿನ ಹಣ ಕೊಡಲು ನಿರಾಕರಿಸಿದ್ದಕ್ಕೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ. ಮಾರತ್ ಹಳ್ಳಿಯ ಯಮಲೂರು ಬಳಿ ಕ್ಷುಲ್ಲಕ ಕಾರಣಕ್ಕಾಗಿ ಕಾರು ಚಾಲಕನ ಮುಖಕ್ಕೆ ಉಗಿದಿದ್ದ ಚಾಲಕ ಕಿರಣ್ ಎಂಬಾತನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದರು.
"ಇತ್ತೀಚಿನ ತಿಂಗಳಲ್ಲಿ ಆಟೋ ಚಾಲಕರು ನಿಯಮ ಉಲ್ಲಂಘಿಸುವುದಲ್ಲದೇ, ಪ್ರಯಾಣಿಕರ ಮೇಲೆ ದೌರ್ಜನ್ಯ ಎಸಗುತ್ತಿರುವುದು ಹೆಚ್ಚಾಗಿದೆ. ಇದನ್ನು ತಹಬದಿಗೆ ತರಲು ಚಾಲಕರ ಮೇಲೆ ನಿಗಾವಹಿಸಿ ಕಾರ್ಯಾಚರಣೆ ಬಿಗಿಗೊಳಿಸಿದ್ದೇವೆ. ತಪ್ಪಿತಸ್ಥ ಚಾಲಕರ ಮೇಲೆ ವಾಹನ ಪರವಾನಗಿ ರದ್ದು ಕೋರಿ ಆರ್‌ಟಿಒಗೆ ಶಿಫಾರಸು ಮಾಡಲಾಗುತ್ತಿದೆ" ಎಂದು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್.ಅನುಚೇತ್ ತಿಳಿಸಿದ್ದಾರೆ.
ಬಾಡಿಗೆಗೆ ಬರಲು ನಕಾರ ಪ್ರಕರಣಗಳು:
ವರ್ಷ | ಪ್ರಕರಣ |
2021 | 363 |
2022 | 2183 |
2023 | 1537 |
2024 | 3058 (ಸೆ.30) |
ಹೆಚ್ಚು ಬಾಡಿಗೆ ಕೇಳಿದ ಪ್ರಕರಣಗಳು:
ವರ್ಷ | ಪ್ರಕರಣ |
2021 | 644 |
2022 | 2179 |
2023 | 1599 |
2024 | 3079 (ಸೆ.30) |