ಬೆಂಗಳೂರು: ಜಯನಗರ ಪೊಲೀಸ್ ಠಾಣಾ ಸಮೀಪದಲ್ಲಿ ಸಿಕ್ಕ ಕೋಟಿ ಗೂ ಅಧಿಕ ಹಣ ಕ್ಲಾಸ್ ಒನ್ ಗುತ್ತಿಗೆದಾರರೊಬ್ಬರಿಗೆ ಸೇರಿದ ಹಣ ಎಂಬ ಮಾಹಿತಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಆದರೆ ಈ ಗುತ್ತಿಗೆದಾರರು ಯಾವುದಾದರೂ ರಾಜಕೀಯ ಪಕ್ಷಕ್ಕೆ ಸೇರಿದ್ದವರಾ? ಅಥವಾ ತಮ್ಮ ವೈಯಕ್ತಿಕ ವ್ಯವಹಾರಕ್ಕೆ ಸಂಬಂಧಿಸಿದಂತೆ ಹಣ ಸಾಗಿಸುತ್ತಿದ್ದರಾ? ಎಂಬ ವಿಚಾರ ತನಿಖೆಯಿಂದ ಬಹಿರಂಗವಾಗಬೇಕಿದೆ.
ಕೋಟ್ಯಾಂತರ ರೂಪಾಯಿ ಹಣ ಸಿಕ್ಕ ಹಿನ್ನೆಲೆಯಲ್ಲಿ ಈಗಾಗಲೇ ಆದಾಯ ತೆರೆಗೆ ಇಲಾಖೆಯ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ಗುತ್ತಿಗೆದಾರರಿಗೆ ನೋಟಿಸ್ ನೀಡಿ ಹಣದ ಮೂಲದ ಕುರಿತು ಮಾಹಿತಿ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಶನಿವಾರ ಹಣ ಸಾಗಾಟದ ಬಗ್ಗೆ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಬೆಂಗಳೂರು ನಗರ ಚುನಾವಣಾಧಿಕಾರಿ ಮುನೀಶ್ ಮೌದ್ಗಿಲ್ ನೇತೃತ್ವದ ತಂಡ ಕಾರ್ಯಾಚರಣೆ ಕೈಗೊಂಡಿದ್ದರು. ಬೆಂಗಳೂರು ನಗರ ದಕ್ಷಿಣ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಜಯನಗರದ 4ನೇ ಹಂತದ ಬಳಿ ಕಾರಿನಲ್ಲಿ ಹಣ ಸಾಗಾಟನೆ ಮಾಡಲಾಗುತ್ತಿತ್ತು. ಚುನಾವಣಾಧಿಕಾರಿಗಳ ತಪಾಸಣೆ ವೇಳೆ ಸಿಕ್ಕಿಹಾಕಿಕೊಳ್ಳುತ್ತಿದ್ದಂತೆ ಕಾರಿನಲ್ಲಿದ್ದ ಕೆಲವರು ಸ್ಥಳದಿಂದ ಕಾಲ್ಕಿತ್ತಿರುವುದು ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿತ್ತು. ರಾಜಕೀಯ ಪಕ್ಷಗಳು ಒಂದರ ಮೇಲೊಂದು ಆರೋಪ ಪ್ರತ್ಯಾರೋಪ ಮಾಡಿದ್ದರು. ಸದ್ಯ ಆ ಎಲ್ಲಾ ಆಯಾಮದಲ್ಲಿಯೂ ತನಿಖೆ ನಡೆಸಲಾಗಿತ್ತಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: ಬೆಂಗಳೂರು: ಕಾರಿನಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರೂಪಾಯಿ ಹಣ ವಶಕ್ಕೆ - Money found in car