ಬೆಂಗಳೂರು: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆಗೆ ಮುಂದೂಡಿತು.
ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ಮುಂದೂಡಿತು. ಯಡಿಯೂರಪ್ಪ ಪರ ವಕೀಲರು, ಅರ್ಜಿದಾರರಿಗೆ 82 ವರ್ಷ ವಯಸ್ಸಾಗಿದೆ. ಅವರ ವಿರುದ್ಧ ದೂರು ದಾಖಲಿಸಿರುವ ಸಂತ್ರಸ್ತ ಬಾಲಕಿಯ ದೂರುದಾರ ತಾಯಿಯ ನಡವಳಿಕೆಯನ್ನು ಗಮನಿಸಬೇಕು. ಅಧಿಕಾರಿಗಳು, ಸಂಬಂಧಿಗಳು, ರಾಜಕಾರಣಿಗಳ ಮೇಲೆ ಸುಮಾರು 56 ದೂರು ನೀಡಿದ್ದಾರೆ. ಘಟನೆ ನಡೆದ ಒಂದೂವರೆ ತಿಂಗಳ ನಂತರ ಮಾರ್ಚ್ 14ರಂದು ಪ್ರಕರಣ ದಾಖಲಿಸಲಾಗಿದೆ. ಬಾಲಕಿಯ ಹೇಳಿಕೆ ಆಧರಿಸಿ ಆರೋಪ ಪಟ್ಟಿ ದಾಖಲಿಸಲಾಗಿದೆ. ಅರ್ಜಿದಾರರು ಅನುಚಿತವಾಗಿ ಸ್ಪರ್ಶಿಸಿದ್ದಾರೆಂದು ಬಾಲಕಿ ಹೇಳಿಕೆ ನೀಡಿದ್ದಾರೆ. ಸ್ಥಳದಲ್ಲಿ ಹಲವು ಜನರಿದ್ದು ಅವರ ಸಮ್ಮುಖದಲ್ಲಿ ಈ ಘಟನೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಆರೋಪಪಟ್ಟಿಯಲ್ಲಿನ ಸಾಕ್ಷಿಗಳು ನೀಡಿರುವ ಹೇಳಿಕೆಗಳಂತೆ, ಅರ್ಜಿದಾರರಿಗೆ ಕೈ ನಡುಗುತ್ತದೆ. ಲೈಟ್ ಸ್ವಿಚ್ ಹಾಕಲೂ ಅವರು ಇತರರಿಗೆ ಹೇಳುತ್ತಾರೆ. ದೂರುದಾರ ಮಹಿಳೆ, ಮಗಳೊಂದಿಗೆ ರೂಮಿಗೆ ಹೋಗಿರಲಿಲ್ಲವೆಂದು ಸಾಕ್ಷಿಯ ಹೇಳಿಕೆ ಇದೆ. ಅಂಗರಕ್ಷಕರು ಅರ್ಜಿದಾರರ ಸುತ್ತಮುತ್ತಲೇ ಇರುತ್ತಾರೆ ಎಂದು ಪೀಠಕ್ಕೆ ವಿವರಿಸಿದರು.
ಶಿವಾನಂದ ತಗಡೂರು ಎಂಬವರು ಆಹ್ವಾನ ಪತ್ರಿಕೆ ಕೊಡಲು ಘಟನೆ ನಡೆದ ಸ್ಥಳಕ್ಕೆ ಬಂದಿದ್ದರು. ಆ ಸಮಯದಲ್ಲಿ ಪರಮಶಿವಯ್ಯ ಎಂಬವರು ಸ್ಥಳದಲ್ಲಿದ್ದರು. ಅಲ್ಲಿದ್ದ ಎಲ್ಲ ಸಾಕ್ಷಿಗಳೂ ಇಂತಹ ಘಟನೆ ನಡೆದಿಲ್ಲ ಎಂದು ಹೇಳಿದ್ದಾರೆ. ಆದರೂ ತನಿಖಾಧಿಕಾರಿ ಕೋರ್ಟ್ಗೆ ಆರೋಪಪಟ್ಟಿ ಸಲ್ಲಿಸಿದ್ದಾರೆ. ಕೇವಲ ಬಾಲಕಿಯ ಹೇಳಿಕೆ ಆಧರಿಸಿ ಆರೋಪಪಟ್ಟಿ ದಾಖಲಿಸಲಾಗಿದೆ ಎಂದು ಪೀಠಕ್ಕೆ ತಿಳಿಸಿದರು.
ಪ್ರಾಸಿಕ್ಯೂಷನ್ ಪರ ಎಸ್‌ಪಿಪಿ ರವಿವರ್ಮಕುಮಾರ್, ನಡೆದ ಘಟನೆಯನ್ನು ಸಂಪೂರ್ಣವಾಗಿ ಸಂತ್ರಸ್ತೆ ಹೇಳಿಕೆಯಲ್ಲಿ ವಿವರಿಸಿದ್ದಾರೆ. ಬಾಲಕಿಯನ್ನು ಅರ್ಜಿದಾರ ಯಡಿಯೂರಪ್ಪ ರೂಮಿನೊಳಗೆ ಕರೆದರು. ನಾನೂ ಬರಬೇಕೇ ಎಂದು ತಾಯಿ ಪ್ರಶ್ನಿಸಿದಾಗ ಬೇಡವೆಂದರು. ಯಡಿಯೂರಪ್ಪ ಒಳಗಿನಿಂದ ಲಾಕ್ ಮಾಡಿದರು. ಈ ವೇಳೆ ನಿನ್ನ ಮೇಲೆ ದೌರ್ಜನ್ಯ ನಡೆಸಿದ ಆರೋಪಿಯನ್ನು ಗುರುತಿಸುತ್ತೀಯಾ ಎಂದು ಪ್ರಶ್ನಿಸಿದರು. ಬಳಿಕ ಬಾಲಕಿ ಹೊರಗಡೆಗೆ ಅಳುತ್ತಾ ಬಂದಳು. ನಂತರ ತಾಯಿಗೆ ವಿಷಯ ತಿಳಿಸಿದ್ದಳು. ಮತ್ತೆ ಯಡಿಯೂರಪ್ಪನವರನ್ನು ಭೇಟಿ ಮಾಡಿದಾಗ ಮೊಬೈಲ್ ವಿಡಿಯೋ ಮಾಡಿಕೊಂಡೆ. ಆಗ ಅವರು ನಿನ್ನ ಮಗಳನ್ನು ಪರಿಶೀಲಿಸಿದ್ದೇನೆ ಅಂತಾ ಹೇಳಿದ್ದಾಗಿ ತಾಯಿ ತಿಳಿಸಿದ್ದಾರೆ ಎಂದು ವಾದ ಮಂಡಿಸಿದರು.
ಇಂದಿನ ಕಲಾಪದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಪೀಠ ವಿಚಾರಣೆಯನ್ನು ನಾಳೆಗೆ ಮುಂದೂಡಿತು.
ಇದನ್ನೂ ಓದಿ: ಪೋಕ್ಸೋ ಪ್ರಕರಣ: ಇಬ್ಬರು ಯುವಕರಿಗೆ ಜೈಲು ಶಿಕ್ಷೆ, ದಂಡ ವಿಧಿಸಿದ ಕೋರ್ಟ್