ಬೆಂಗಳೂರು: ಮುಡಾ ಹಗರಣ ಆರೋಪದಲ್ಲಿ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ವಿರುದ್ಧ ನಾಳೆ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ. ಸಿಎಂ ಪರವಾಗಿ ಸುಪ್ರೀಂ ಕೋರ್ಟ್ ಹಿರಿಯ ವಕೀಲರಾದ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್ ಅರ್ಜಿ ಸಲ್ಲಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಿಎಂ ಮಂತ್ರಾಲಯ ಪ್ರವಾಸ ರದ್ದು: ನಾಳೆ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿರುವ ಅಭಿಷೇಕ್ ಮನು ಸಿಂಘ್ವಿ ಮತ್ತು ಕಪಿಲ್ ಸಿಬಲ್, ಸಿದ್ದರಾಮಯ್ಯ ಜೊತೆ ಸುದೀರ್ಘ ಚರ್ಚೆ ನಡೆಸಲಿದ್ದಾರೆ. ಹೀಗಾಗಿ, ನಾಳಿನ ಮಂತ್ರಾಲಯ ಪ್ರವಾಸವನ್ನು ಸಿಎಂ ರದ್ದು ಮಾಡಿದ್ದಾರೆ.
ಇದಕ್ಕೂ ಮುನ್ನ ಕಾವೇರಿ ನಿವಾಸದಲ್ಲಿ ಸಿಎಂ ತಮ್ಮ ಆಪ್ತ ಸಚಿವರು, ವಕೀಲರು ಮತ್ತು ಸಿಎಂ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಬಳಿ ಸಲಹೆ ಪಡೆದರು. ಈ ವೇಳೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವ ಬಗ್ಗೆ ಚರ್ಚಿಸಲಾಗಿದೆ. ಕಾನೂನುಬಾಹಿರವಾಗಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದರ ವಿರುದ್ಧ ಅರ್ಜಿ ಸಲ್ಲಿಸಿ, ರಾಜ್ಯಪಾಲರ ಪೂರ್ವಾನುಮತಿ ವಜಾಗೊಳಿಸಲು ಮನವಿ ಮಾಡಲು ನಿರ್ಧರಿಸಲಾಗಿದೆ.
ಕಾವೇರಿಗೆ ಆಪ್ತ ಸಚಿವರ ಭೇಟಿ: ಇನ್ನು ಕಾವೇರಿ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಲು ಆಪ್ತ ಸಚಿವರು ಆಗಮಿಸಿದರು. ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್, ಕೃಷ್ಣಾ ಬೈರೇಗೌಡ, ಹೆಚ್.ಸಿ.ಮಹದೇವಪ್ಪ, ಭೈರತಿ ಸುರೇಶ್ ಸೇರಿ ಕಾಂಗ್ರೆಸ್ ಶಾಸಕರು ಭೇಟಿ ನೀಡಿ ಸಮಾಲೋಚನೆ ನಡೆಸಿದರು. ಯಾವುದೇ ಅಧಿಕೃತ ಕಾರ್ಯಕ್ರಮಗಳಿಗೆ ಹೋಗದೇ ಸಿಎಂ ಆಪ್ತರ ಜೊತೆ ಸಮಾಲೋಚನೆ ನಡೆಸಿದರು.
'ಅವರು ಟಗರು, ಧೈರ್ಯ ಹೇಳಿದ್ದೇನೆ': ಸಿ.ಎಂ.ಇಬ್ರಾಹಿಂ ಆಗಮಿಸಿ ಸಿಎಂ ಭೇಟಿ ಮಾಡಿ ಚರ್ಚೆ ನಡೆಸಿದರು. ಬಳಿಕ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕರ್ನಾಟಕದ ಜನರ ಸ್ವಾಭಿಮಾನವನ್ನು ಕೆಣಕಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ರಾಜ್ಯಪಾಲರು ಉಲ್ಲಂಘಿಸಿದ್ದಾರೆ. ಕುಮಾರಸ್ವಾಮಿ, ಯಡಿಯೂರಪ್ಪ ಮೇಲೆ ಪ್ರಕರಣಗಳಿವೆ. ಅವರ ಮೇಲೆ ಪ್ರಾಸಿಕ್ಯೂಷನ್‌ಗೆ ಏಕೆ ಅನುಮತಿ ಕೊಟ್ಟಿಲ್ಲ?. ಯಾವುದೇ ಲೆಕ್ಕಕ್ಕೆ ಬಾರದ ಮನುಷ್ಯ, ಸಾಮಾನ್ಯ ಮನುಷ್ಯನ ದೂರಿನ ಮೇಲೆ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಇದರ ವಿರುದ್ಧ ನಾವು ಪ್ರತಿಭಟನೆ ಮಾಡುತ್ತೇನೆ. ಅವರು ಟಗರು, ಧೈರ್ಯ ಹೇಳಿದ್ದೇನೆ ಎಂದರು.
ಇದನ್ನೂ ಓದಿ: ಆಗಸ್ಟ್ 22ರಂದು ತುರ್ತು ಶಾಸಕಾಂಗ ಸಭೆ ಕರೆದ ಸಿಎಂ ಸಿದ್ದರಾಮಯ್ಯ - Congress Legislative Party Meeting