ಬೆಂಗಳೂರು: ಮೈಸೂರು - ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಿ, ಈ ಕ್ಷೇತ್ರಕ್ಕೆ ಹೊಸದಾಗಿ ಚುನಾವಣೆ ನಡೆಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಕೆಯಾಗಿದೆ. ತಮ್ಮ ನಾಮಪತ್ರವನ್ನು ಸೂಕ್ತ ಕಾರಣವಿಲ್ಲದೇ ತಿರಸ್ಕರಿಸಿದ್ದ ಚುನಾವಣಾಧಿಕಾರಿಯ ಕ್ರಮವನ್ನು ಪ್ರಶ್ನಿಸಿ ಬಹುಜನ ಸಮಾಜವಾಗಿ ಪಕ್ಷದ(ಬಿಎಸ್‌ಪಿ) ಅಭ್ಯರ್ಥಿ ಆಕಾಂಕ್ಷಿಯಾಗಿದ್ದ ರೇವತಿ ರಾಜ್ ಅಲಿಯಾಸ್ ಭೀಮಪುತ್ರಿ ರೇವತಿ ರಾಜ್ ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಅರ್ಜಿಯಲ್ಲಿ ಚುನಾವಣಾ ಆಯೋಗ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ಇತರೆ ಪರಾಜಿತ ಅಭ್ಯರ್ಥಿಗಳನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಾಗಿದೆ.
ಅರ್ಜಿಯಲ್ಲಿರುವ ಅಂಶಗಳು: "ಅರ್ಜಿದಾರರು ಚುನಾವಣಾ ಆಯೋಗಕ್ಕೆ 2024ರ ಏಪ್ರಿಲ್ 4ರಂದು ನಾಮಪತ್ರ ಸಲ್ಲಿಸಿದ್ದರು. ಆದರೆ, ನಾಮಪತ್ರದ ಕಾಲಂ 7, 7(ಎ), 7(ಎ)(ಬಿ) ಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡಿಲ್ಲ. ಆದ ಕಾರಣ ಏಪ್ರಿಲ್ 5ರ ಬೆಳಗ್ಗೆ 11 ಗಂಟೆಯ ಒಳಗಾಗಿ ಸರಿಯಾಗಿ ಭರ್ತಿ ಮಾಡಿ ನಾಮಪತ್ರ ಸಲ್ಲಿಸಬೇಕು ಎಂದು ಸೂಚನೆ ನೀಡಿದ್ದರು. ಆದರೆ, ಸರಿಯಾದ ಸಮಯಕ್ಕೆ ನಾಮಪತ್ರ ಸಲ್ಲಿದ್ದರೂ ಚುನಾವಣಾಧಿಕಾರಿ, ಅರ್ಜಿದಾರರು ಸಮಯಕ್ಕೆ ಬಂದಿಲ್ಲ ಎಂಬುದಾಗಿ ತಿಳಿಸಿ ತಿರಸ್ಕರಿಸಿದ್ದರು. ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರದ ಮೂಲಕ ದೂರು ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ" ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಆದರೆ, ಪ್ರಜಾಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 36ರಲ್ಲಿ ತಿಳಿಸಿರುವಂತೆ ಅಭ್ಯರ್ಥಿಗಳು, ಅವರ ಪ್ರತಿನಿಧಿಗಳು ಸಲ್ಲಿಸುವ ನಾಮಪತ್ರಗಳನ್ನು ನಿಯಮಗಳ ಪ್ರಕಾರ ಪಶೀಲನೆಗೆ ಅವಕಾಶ ನೀಡಬೇಕು. ಬಳಿಕ ಪರಿಶೀಲಿಸಿ ಅಭ್ಯರ್ಥಿಯ ಸಹಿ ಅಲ್ಲವಾಗಿದ್ದಲ್ಲಿ, ಗಣನೀಯವಾದ ಕಾರಣವಿಲ್ಲದೇ ನಾಮಪತ್ರ ತಿರಸ್ಕರಿಸುವಂತಿಲ್ಲ ಎಂದು ತಿಳಿಸಲಾಗಿದೆ.
ಜತೆಗೆ, ಗಲಭೆ ಹಾಗೂ ಬಹಿರಂಗ ಹಿಂಸಾಚಾರದಂತಹ ಕಾರಣಗಳಿಲ್ಲದೆ, ಅಭ್ಯರ್ಥಿಯ ನಾಮಪತ್ರ ಪರಿಶೀಲನೆಯನ್ನು ನಿರಾಕರಿಸುವಂತಿಲ್ಲ. ಚುನಾವಣಾಧಿಕಾರಿ ಇಲ್ಲವೇ ಇತರ ವ್ಯಕ್ತಿಗಳಿಂದ ಆಕ್ಷೇಪಗಳು ಬಂದಲ್ಲಿ, ಅದಕ್ಕೆ ಸಂಬಂಧಿಸಿದಂತೆ ನಾಮಪತ್ರ ದಿನಾಂಕದ ಒಂದು ದಿನದಲ್ಲಿ ಕಾರಣ ತಿಳಿಸುವುದಕ್ಕೆ ಅವಕಾಶ ನೀಡಬೇಕು. ಇದಕ್ಕೆ ಕಾರಣವನ್ನು ಚುನಾವಣಾಧಿಕಾರಿಗಳು ಉಲ್ಲೇಖಿಸಬೇಕು. ನಾಮಪತ್ರ ತಿರಸ್ಕರಿಸಿರುವುದಕ್ಕೆ ಕಾರಣವನ್ನು ಸಂಕ್ಷಿಪ್ತವಾಗಿ ವಿವರಿಸಬೇಕು ಎಂದು ತಿಳಿಸಲಾಗಿದೆ.
ಆದರೆ, ಈ ರೀತಿಯಲ್ಲಿ ಸಕಾರಣವಿಲ್ಲದೇ ತಮ್ಮ ಅರ್ಜಿಯನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದಾರೆ. ಇದು ಕಾನೂನು ಬಾಹಿರ ಕ್ರಮವಾಗಿದ್ದು, ಮೈಸೂರು-ಕೊಡಗು ಲೋಕಸಭಾ ಚುನಾವಣೆಗೆ ಮರುಚುನಾವಣೆ ನಡೆಸಲು ಸೂಚನೆ ನೀಡಬೇಕು ಎಂದು ಕೋರಿದ್ದಾರೆ. ಮೈಸೂರು- ಕೊಡಗು ಲೋಕಸಭಾ ಚುನಾವಣೆ 2024ರ ಏಪ್ರಿಲ್ 26ರಂದು ನಡೆದಿದ್ದು, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಂದರಾಗಿ ಆಯ್ಕೆಯಾಗಿದ್ದಾರೆ.