ಬೆಂಗಳೂರು: ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಚುನಾಯಿತರಾದ ಕಾಂಗ್ರೆಸ್ ಪಕ್ಷದ ಸಂಸದ ಶ್ರೇಯಸ್ ಎಂ. ಪಟೇಲ್ ಮತ್ತು ದಾವಣೆಗೆರೆ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‌ನ ಡಾ.ಪ್ರಭಾ ಮಲ್ಲಿಕಾರ್ಜುನ್ ಆಯ್ಕೆ ಸಿಂಧುತ್ವ ಪ್ರಶ್ನಿಸಿ ಹೈಕೋರ್ಟ್‌ಗೆ ಪ್ರತ್ಯೇಕವಾಗಿ ಎರಡು ಅರ್ಜಿಗಳು ಸಲ್ಲಿಕೆಯಾಗಿವೆ. ಈ ಅರ್ಜಿಗಳು ಇನ್ನೂ ಕಚೇರಿಯ ಪರಿಶೀಲನೆಯಲ್ಲಿದ್ದು, ಬಳಿಕ ನ್ಯಾಯಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಬೇಕಾಗಿದೆ.
ಶ್ರೇಯಸ್ ಪಟೇಲ್ ಆಯ್ಕೆ ರದ್ದು ಕೋರಿರುವ ಅರ್ಜಿ: ಹಾಸನ ಸಂಸದ ಶ್ರೇಯಸ್ ಪಟೇಲ್ ಆಯ್ಕೆ ಅಸಿಂಧು ಕೋರಿ ವಕೀಲ ದೇವರಾಜೇಗೌಡ ಪುತ್ರ ಡಿ.ಚರಣ್, ಚುನಾವಣಾ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಅವರು ಶ್ರೇಯಸ್ ಪಟೇಲ್ ಅವರ ನಾಮಪತ್ರ ಕ್ರಮಬದ್ಧವಾಗಿಲ್ಲವೆಂದು ಘೋಷಿಸುವಂತೆ ಕೋರಿದ್ದಾರೆ. ಅಲ್ಲದೇ, ಸಂಸದರಾಗಿ ಶ್ರೇಯಸ್ ಎಂ.ಪಟೇಲ್ ಹಿಂದಿನ ಐದು ವರ್ಷಗಳ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿಲ್ಲ. ಮತ್ತು ಆ ಕುರಿತು ಪ್ರಮಾಣ ಪತ್ರದಲ್ಲಿ ಸಂಪೂರ್ಣ ಮಾಹಿತಿ ನೀಡಿಲ್ಲ ಎಂದು ಅರ್ಜಿಯಲ್ಲಿ ವಿವರಿಸಿದ್ದಾರೆ.
ಜತೆಗೆ ಚುನಾವಣಾ ವೆಚ್ಚದ ಬಗ್ಗೆಯೂ ತಪ್ಪು ಮಾಹಿತಿ ನೀಡಲಾಗಿದೆ. ನಿಗದಿಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಿದ್ದಾರೆ. ಆ ಕುರಿತು ಸರಿಯಾದ ಲೆಕ್ಕವನ್ನು ಆಯೋಗಕ್ಕೆ ಸಲ್ಲಿಕೆ ಮಾಡಿಲ್ಲ. ಹಾಗಾಗಿ ಅವರ ಆಯ್ಕೆಯನ್ನೇ ರದ್ದುಗೊಳಿಸಬೇಕು ಎಂದು ಕೋರಿದ್ದಾರೆ.
ಪ್ರಭಾ ಮಲ್ಲಿಕಾರ್ಜುನ ಆಯ್ಕೆ ರದ್ದು ಕೋರಿರುವ ಅರ್ಜಿ: ದಾವಣಗೆರೆ ಸಂಸದರಾಗಿ ಡಾ. ಪ್ರಭಾ ಮಲ್ಲಿಕಾರ್ಜುನ ಆಯ್ಕೆ ಅಸಿಂಧು ಕೋರಿ ಪರಾಜಿತ ಅಭ್ಯರ್ಥಿ ಜಿ.ಎಸ್. ಗಾಯತ್ರಿ ಸಿದ್ದೇಶ್ವರ ತಕರಾರು ಅರ್ಜಿ ಸಲ್ಲಿಸಿದ್ದಾರೆ.
ಪ್ರತಿವಾದಿಯಾಗಿರುವ ಪ್ರಭಾ ಮಲ್ಲಿಕಾರ್ಜುನ್ ಅವರು ಕಾಗ್ರೆಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಿಸಿ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಅಲ್ಲದೇ, ಮಹಿಳೆಯರಿಗೆ 1 ಲಕ್ಷ ಕೊಡುವುದಾಗಿ ಭರವಸೆ ನೀಡಿದ್ದಾರೆ. ಇದು ಪ್ರಜಾಪ್ರತಿನಿಧಿ ಕಾಯ್ದೆಗೆ ತದ್ವಿರುದ್ಧವಾಗಿದೆ. ಮತದಾರರಿಗೆ ಲಂಚದ ಆಮಿಷ ಒಡ್ಡಿದ್ದಾರೆ. ಮತ್ತು ಚುನಾವಣಾ ಅಕ್ರಮಗಳನ್ನು ನಡೆಸಿ ಅವರು ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರ ಆಯ್ಕೆಯನ್ನು ಅಸಿಂಧು ಎಂದು ಘೋಷಣೆ ಮಾಡಬೇಕು ಎಂದು ಅವರು ಅರ್ಜಿಯಲ್ಲಿ ಕೋರಿದ್ದಾರೆ.
ಇದನ್ನೂ ಓದಿ: ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದ ಸಂಸದೆ; ಬಿಎಸ್ವೈ ಪರ ಶಾಮನೂರು ಬ್ಯಾಟಿಂಗ್ - Prabha Mallikarjun