ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪ್ರಕರಣದ ಮೊದಲ ಆರೋಪಿ ಪವಿತ್ರಾ ಗೌಡ ಹಾಗೂ ಏಳನೇ ಆರೋಪಿ ಅನುಕುಮಾರ್ ಇಂದು ಸೆಷನ್ಸ್ ಕೋರ್ಟ್ಗೆ ಜಾಮೀನು ಅರ್ಜಿ ಸಲ್ಲಿಸಿದ್ದಾರೆ.
ಪವಿತ್ರಾ ಗೌಡ ಪರ ಹಿರಿಯ ವಕೀಲ ರೇನಿ ಸಬಾಸ್ಟಿನ್ ಜಾಮೀನು ಅರ್ಜಿ ಸಲ್ಲಿಸಿದರು. ಅರ್ಜಿ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಆಕ್ಷೇಪಣೆ ಸಲ್ಲಿಸುವಂತೆ ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರಿಗೆ ನೊಟೀಸ್ ಜಾರಿ ಮಾಡಿ ಆಗಸ್ಟ್ 22ಕ್ಕೆ ವಿಚಾರಣೆ ಮೂಂದೂಡಿತು. ಜೈಲು ಸೇರಿ ಸುಮಾರು 75 ದಿನ ಕಳೆದ ಬಳಿಕ ಪವಿತ್ರಾ ಗೌಡ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ.
ಇನ್ನೊಂದೆಡೆ, ಆರೋಪಿ ಅನುಕುಮಾರ್ ಪರ ವಕೀಲ ಕೆ.ರಾಮ್ ಸಿಂಗ್ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಅನುಕುಮಾರ್ ಬಂಧನವಾಗುತ್ತಿದ್ದಂತೆ ಅವರ ತಂದೆ ಸಾವನ್ನಪ್ಪಿದ್ದರು. ಕೊಲೆಗೂ ಅನುಕುಮಾರ್ಗೂ ಸಂಬಂಧವಿಲ್ಲ. ನಟ ದರ್ಶನ್ ಅವರನ್ನು ನೋಡುವ ಆಸೆಯಲ್ಲಿ ಚಿತ್ರದುರ್ಗದಿಂದ ಬಂದಿದ್ದಾನೆ. ದಾರಿ ಮಧ್ಯೆ ಅನುಕುಮಾರ್ಗೆ ರೇಣುಕಾಸ್ವಾಮಿ ಮೆಸೇಜ್ ಮಾಡಿರುವ ವಿಚಾರ ಗೊತ್ತಾಗಿದೆ. ಅನುಕುಮಾರ್ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾದ ಶೆಡ್ ಒಳಗೂ ಹೋಗಿಲ್ಲ. ಶವ ಎಸೆಯುವುದಕ್ಕೆ ಆತ ಹೋಗಿಲ್ಲ ಎಂಬ ಪ್ರಮುಖ ಅಂಶಗಳ ಉಲ್ಲೇಖಿಸಿ ಕಳೆದ ಶನಿವಾರ ವಕೀಲ ರಾಮ್ ಸಿಂಗ್ ಜಾಮೀನು ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಆಕ್ಷೇಪಣೆ ಸಲ್ಲಿಸುವಂತೆ ಪೊಲೀಸರಿಗೆ ನೊಟೀಸ್ ನೀಡಿ ವಿಚಾರಣೆ ಮುಂದೂಡಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್: 17 ಆರೋಪಿಗಳ ಪ್ರೊಫೈಲ್ ತಯಾರಿಗೆ ಸಿದ್ಧತೆ - Renukaswamy Murder Case