ಕಾರವಾರ (ಉತ್ತರ ಕನ್ನಡ): ನೌಕಾನೆಲೆ ಯೋಜನೆಗಾಗಿ ತಮ್ಮ ಮನೆಮಠವನ್ನು ಕಳೆದುಕೊಂಡು ಎರಡು ದಶಕಗಳೇ ಕಳೆದು ಹೋಗಿದೆ. ಯೋಜನೆ ಆರಂಭವಾಗಿ ಇದೀಗ ಎರಡನೇ ಹಂತದ ಕಾಮಗಾರಿ ಕೂಡ ಪೂರ್ಣವಾಗುತ್ತಾ ಬಂದಿದೆ. ಆದರೆ ಯೋಜನೆಗಾಗಿ ನಿರಾಶ್ರಿತರಾದ ತಮಗೆ ಸೂಕ್ತ ಪರಿಹಾರ ದೊರೆಯದೇ ಇಂದಿಗೂ ಕಚೇರಿಗಳಿಗೆ ಅಲೆದಾಡುತ್ತಿದ್ದೇವೆ ಎಂದು ಸಂತ್ರಸ್ತರು ಅಳಲು ತೋಡಿಕೊಂಡಿದ್ದಾರೆ.
ಕದಂಬ ನೌಕಾನೆಲೆ ದೇಶದ ಪ್ರತಿಷ್ಠಿತ ಯೋಜನೆಗಳಲ್ಲಿ ಒಂದು. ಏಷ್ಯಾದಲ್ಲಿಯೇ ಅತಿದೊಡ್ಡ ನೌಕಾನೆಲೆ ಎನ್ನುವ ಹೆಗ್ಗಳಿಕೆ ಕೂಡ ಪಡೆದಿದೆ. ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಅರಗ ಗ್ರಾಮದಲ್ಲಿ ತಲೆ ಎತ್ತಿದ ಈ ಯೋಜನೆ ನಿರ್ಮಾಣಕ್ಕೆ ಸಾವಿರಾರು ಜನರು ತಮ್ಮ ಭೂಮಿಯನ್ನು ನೀಡಿದ್ದರು. ಹತ್ತಾರು ಗ್ರಾಮಗಳು ಯೋಜನೆ ವ್ಯಾಪ್ತಿಗೆ ಒಳಪಟ್ಟ ಕಾರಣ ಜನರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿತ್ತು. ಆದರೆ ಭೂಮಿ ನೀಡಿದ್ದ ಸುಮಾರು ನೂರಾರು ಕುಟುಂಬಗಳಿಗೆ ಇಂದಿಗೂ ಸರಿಯಾದ ಪರಿಹಾರ ಬಂದಿಲ್ಲ. ಒಂದೆಡೆ, ಸೂಕ್ತ ಪರಿಹಾರ ಕೊಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದು, ಇನ್ನೊಂದೆಡೆ, ಯೋಜನೆಗೆ ಭೂಮಿ ನೀಡಿದವರಿಗೆ ಪರಿಹಾರ ಕೊಡಲು ಮಂಜೂರಾಗಿದ್ದ ಹಣವನ್ನು ಪಡೆಯಲು ನಿತ್ಯ ಕಚೇರಿಗೆ ಅಲೆದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಯೋಜನೆ ಪ್ರಾರಂಭದ ವೇಳೆ ಭೂಮಿ ನೀಡಿದವರಿಗೆ ಉದ್ಯೋಗ ಕೊಡುವುದಾಗಿ ಹೇಳಲಾಗಿತ್ತು. ಸದ್ಯ ಉದ್ಯೋಗವೂ ಇಲ್ಲದೇ, ಪರಿಹಾರವೂ ಸಿಗದೇ ಜನ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ.
ಇವರ ಮಾತು ನಂಬಿ ಸಾಲ ಮಾಡಿಕೊಂಡಿದ್ದು, ಇದೀಗ ಬಡ್ಡಿ ತೀರಿಸಲು ಸಾಧ್ಯವಾಗದ ಸ್ಥಿತಿ ಇದೆ. ಅಲ್ಲದೆ, ಪರಿಹಾರ ಬರುವ ನಂಬಿಕೆಯಲ್ಲಿದ್ದ ಅನೇಕರು ಸಾವನ್ನಪ್ಪಿದ್ದಾರೆ. ಭೂಮಿ ನೀಡಿದ ಸಂದರ್ಭದಲ್ಲಿ ಕಡಿಮೆ ಪರಿಹಾರ ನೀಡಲಾಗಿತ್ತು. ಇದನ್ನು ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ಸುಪ್ರಿಂ ಕೋರ್ಟ್ ಗುಂಟೆಗೆ 11,500 ರೂ. ಹಾಗೂ ಇಷ್ಟು ದಿನಗಳ ಕಾಲದ ಬಡ್ಡಿ ನೀಡುವಂತೆ ಆದೇಶ ನೀಡಿತ್ತು. ನ್ಯಾಯಾಲಯದ ಮೊರೆ ಹೋಗಿದ್ದ ಜನರಿಗೆ ಸರ್ಕಾರ ಪರಿಹಾರ ನೀಡಿತ್ತು. ಆದರೆ ಇನ್ನೂ ಸಹ ನೂರಾರು ಕುಟುಂಬಗಳಿಗೆ ನಾನಾ ಕಾರಣಗಳನ್ನು ನೀಡಿ ಇಂದಿಗೂ ಪರಿಹಾರ ನೀಡಿಲ್ಲ. 25 ವರ್ಷಗಳಿಂದ ಪರಿಹಾರಕ್ಕಾಗಿ ಕೆಲಸ ಕಾರ್ಯ ಬಿಟ್ಟು ಕಚೇರಿಗೆ ಅಲೆದಾಡಿ, ಸುಸ್ತಾಗಿದ್ದೇವೆ. ಇನ್ನಾದರೂ ತಮಗೆ ನ್ಯಾಯ ಕೊಡಿ ಎಂದು ನಿರಾಶ್ರಿತರು ಕೇಳಿಕೊಳ್ಳುತ್ತಿದ್ದಾರೆ.
ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್ ಮಾತನಾಡಿ, "ಈ ಹಿಂದೆ ಹೆಚ್ಚುವರಿ ಪರಿಹಾರಕ್ಕೆ ಅರ್ಜಿ ಹಾಕಿದ್ದ ಕೆಲವರಿಗೆ ಸುಮಾರು 1 ಕೋಟಿಯಷ್ಟು ಹಣ ಬಿಡುಗಡೆಯಾಗಿದೆ. ಇದೀಗ ಸೀಬರ್ಡ್ ಪರಿಹಾರ ಬಾರದೆ ಹಲವರು ಮನವಿ ಸಲ್ಲಿಸಿದ್ದು, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೂ ತರಲಾಗಿದೆ. ಸರ್ಕಾರದ ಮಟ್ಟದಲ್ಲಿಯೂ ಪ್ರಯತ್ನ ನಡೆಸಲಾಗುತ್ತಿದೆ. ಬಿಡುಗಡೆಯಾದ ಪರಿಹಾರವನ್ನು ಪರಿಶೀಲಿಸಿ ವಿತರಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ನಿರಾಶ್ರಿತರು ಗಣಶ್ಯಾಮ್ ಅವರು ಮಾತನಾಡಿ, "ಆಗ ನೀಡಿದ ಭೂಮಿಗೆ ಇನ್ನೂ ಸರಿಯಾದ ಪರಿಹಾರ ಬಂದಿಲ್ಲ. ಕಚೇರಿಗೆ ಅಲೆದು ಸಾಕಾಗಿದೆ. ಈಗ ಬೇರೆ ಭೂಮಿ ಖರೀದಿಸಲು ಗುಂಟೆಗೆ 10- 15 ಲಕ್ಷ ಕೇಳ್ತಾರೆ. ಅಷ್ಟು ಹಣ ಕೊಟ್ಟು ಜಾಗ ಖರೀದಿಸುವ ಪರಿಸ್ಥಿತಿಯಲ್ಲಿ ನಾವಿಲ್ಲ. ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ, ಯಾವುದೇ ಪ್ರತಿಕ್ರಿಯೆ ಇಲ್ಲ. ಇನ್ನು ಮುಂದೆಯೂ ಹೀಗೆಯೇ ಆದರೆ, ನಾವು ನೀಡಿರುವ ಜಾಗದಲ್ಲೇ ವಾಪಾಸ್ ಹೋಗಿ ಮನೆ ಕಟ್ಟುತ್ತೇವೆ. ಈ ಬಗ್ಗೆ ನಾವು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇವೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ." ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕಾರವಾರ: ಕೊಂಕಣ ರೈಲ್ವೆ ಯೋಜನೆಯಲ್ಲಿ ಜಮೀನು ಕಳೆದುಕೊಂಡ ನಿರಾಶ್ರಿತರಿಂದ ಪರಿಹಾರಕ್ಕೆ ಒತ್ತಾಯ