ಕಾರವಾರ: ಆಸ್ತಿ ನೋಂದಣಿಗೆ ರಾಜ್ಯ ಸರ್ಕಾರ ಇ - ಸ್ವತ್ತು ಕಡ್ಡಾಯಗೊಳಿಸಿದೆ. ನಕಲಿ ಆಸ್ತಿ ನೋಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ಆದೇಶ ಮಾಡಿದೆ. ಆದರೆ, ಗುಡ್ಡಗಾಡು ಪ್ರದೇಶವಾದ ಉತ್ತರಕನ್ನಡದ ಜನರಿಗೆ ಆಸ್ತಿ ನೊಂದಣಿಗೆ ಇ - ಸ್ವತ್ತು ಮಾಡಿಸಲು ಇರುವ ನಿಯಮಗಳೇ ಮಾರಕವಾಗಿದ್ದು, ಪರದಾಡುವಂತಾಗಿದೆ.
ರಾಜ್ಯ ಸರ್ಕಾರ ಆಸ್ತಿ ನೊಂದಣಿ, ಮಾರಾಟಕ್ಕೆ ಇ - ಸ್ವತ್ತು ಕಡ್ಡಾಯ ಎನ್ನುವ ನಿಯಮವನ್ನು ಮಾಡಿದೆ. ನಕಲಿ ಪಹಣಿ ಪತ್ರ ಬಳಸಿ ಆಸ್ತಿ ಮಾರಾಟ ಮಾಡುವುದು, ಒಂದೇ ಆಸ್ತಿಯನ್ನು ಇಬ್ಬರು, ಮೂವರಿಗೆ ಮಾರಾಟ ಮಾಡುವುದು ಸೇರಿ ವಂಚನೆ ಪ್ರಕರಣ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಆದರೆ, ಇದೇ ನಿಯಮವು ಇದೀಗ ಗುಡ್ಡಗಾಡು ಪ್ರದೇಶವಾದ ಉತ್ತರಕನ್ನಡ ಜನರಿಗೆ ತಲೆನೋವಾಗಿ ಪರಿಣಮಿಸಿದೆ.
ವಿನಾಯಿತಿ ನೀಡಲು ಆಗ್ರಹ: ಜಿಲ್ಲೆಯಲ್ಲಿ ಹೆಚ್ಚು ಅರಣ್ಯ ಹಾಗೂ ಕರಾವಳಿ ಪ್ರದೇಶವೇ ಇದ್ದು ತುಂಡು ಭೂಮಿಯಲ್ಲಿ ಜನರು ಜೀವನವನ್ನು ಕಟ್ಟಿಕೊಂಡಿದ್ದಾರೆ. ಇದಲ್ಲದೇ, ಹಲವು ಜಾಗಗಳಿಗೆ ರಸ್ತೆಯೇ ಇಲ್ಲದೇ ಕಾಲು ದಾರಿಯಲ್ಲಿಯೇ ಸಾಗುವ ಪರಿಸ್ಥಿತಿ ಇದೆ. ಸರ್ಕಾರ ಇ - ಸ್ವತ್ತನ್ನು ಮಾಡಿಸಬೇಕಾದರೆ ಆಸ್ತಿಗೆ ಕಡ್ಡಾಯವಾಗಿ ಸಾಗಲು ರಸ್ತೆ, ಹೀಗೆ ಹತ್ತು ಹಲವು ನಿಯಮಗಳನ್ನು ಹಾಕಿದೆ. ರಸ್ತೆ ನಿರಪೇಕ್ಷಣಾ ಪತ್ರ ಕೊಟ್ಟರೆ ಮಾತ್ರ ಇ-ಸ್ವತ್ತು ಆಗಲಿದೆ. ಆದರೆ, ಇವೆಲ್ಲ ನಿಯಮಗಳಿಂದ ಜಿಲ್ಲೆಯ ಜನರಿಗೆ ಸಮಸ್ಯೆ ತಂದೊಡ್ಡಿವೆ. ಹಲವು ಭಾಗದಲ್ಲಿ ಇಂದಿಗೂ ರಸ್ತೆಗಳೇ ಇಲ್ಲ. ಇ-ಸ್ವತ್ತು ಮಾಡಿಸಬೇಕಾದರೆ ಸಮಸ್ಯೆ ಆಗುತ್ತಿದ್ದು, ಸರ್ಕಾರವು ಹಾಕಿರುವ ನಿಯಮಗಳನ್ನು ಸರಳೀಕರಣ ಮಾಡಲಿ. ಇಲ್ಲದಿದ್ದರೆ, ಉತ್ತರಕನ್ನಡಕ್ಕೆ ವಿನಾಯಿತಿ ನೀಡಲಿ ಎನ್ನುತ್ತಾರೆ ಸ್ಥಳೀಯರು.
ಸದ್ಯ ಮನೆಗಳನ್ನು ನಿರ್ಮಾಣ ಮಾಡಬೇಕಾದರೆ, ಬ್ಯಾಂಕ್ಗಳಲ್ಲಿ ಸಾಲವನ್ನು ಪಡೆಯಬೇಕಾದರೆ ಇ-ಸ್ವತ್ತು ಕಡ್ಡಾಯ ಮಾಡಲಾಗಿದೆ. ಆದರೆ ಇ-ಸ್ವತ್ತು ಮಾಡಿಸಲು ಹಲವು ನಿಯಮಾವಳಿಗಳು ಜನರಿಗೆ ಅಡ್ಡಿಯಾಗಿದ್ದು, ಸಾಲ ಪಡೆಯಲು ಕಷ್ಟಪಡುವಂತಾಗಿದೆ. ಹಲವು ವರ್ಷಗಳಿಂದ ಜನರು ಪರದಾಡುತ್ತಿದ್ದು, ಈ ಹಿಂದೆ ಜಿಲ್ಲೆಯ ಸಚಿವರು, ಶಾಸಕರು ಜಿಲ್ಲೆಗೆ ಇ-ಸ್ವತ್ತು ವಿನಾಯಿತಿ ನೀಡುವಂತೆ ಸರ್ಕಾರಕ್ಕೆ ಒತ್ತಾಯ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.
ಕಂದಾಯ ಸಚಿವರ ಪ್ರತಿಕ್ರಿಯೆ: ಈ ಬಗ್ಗೆ ಸಚಿವ ಕೃಷ್ಣ ಬೈರೇಗೌಡರ ಬಳಿ ಕೇಳಿದರೆ, ''ಇ-ಸ್ವತ್ತು ನಿಯಮಗಳು ಸರಳೀಕರಣ ಆಗಬೇಕೆನ್ನುವುದು ಖಂಡಿತಾ ಸರ್ಕಾರದ ಗಮನದಲ್ಲಿದೆ. ಈ ಬಗ್ಗೆ ಆರ್ಡಿಪಿಆರ್ ಇಲಾಖೆ ಹಾಗೂ ಮುನ್ಸಿಪಾಲಿಟಿಯವರು ಪ್ರಯತ್ನಿಸುತ್ತಿದ್ದಾರೆ. ಕೆಲವು ಬದಲಾವಣೆ ತರಲು ಹೊರಟಿದ್ದಾರೆ.
ಆದರೆ, ಕಾನೂನುಗಳೂ ಕೂಡ ಅದಕ್ಕೆ ತೊಡಕಾಗಿವೆ. ಅದೆಲ್ಲವನ್ನೂ ನಿವಾರಣೆ ಮಾಡಿಕೊಂಡು ಸರಳೀಕರಣ ಮಾಡಬೇಕಿದೆ. ಈ ಬಗ್ಗೆ ಸಂಬಂಧಿತ ಸಚಿವರು ಪ್ರಯತ್ನದಲ್ಲಿದ್ದಾರೆ. ಅವರಿಗೆ ಪೂರಕವಾಗಿ ನಾವೂ ಕೂಡ ಕಂದಾಯ ಇಲಾಖೆಯಿಂದ ಸಲಹೆಗಳನ್ನು ಕೊಟ್ಟಿದ್ದೇವೆ. ಸಮಸ್ಯೆ ಜಟಿಲವಾಗಿದ್ದು, ಪರಿಹಾರಕ್ಕೆ ಪಯತ್ನ ಮಾಡುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: 'ಕಾವೇರಿ 5ನೇ ಹಂತ'ದ ಕುಡಿಯುವ ನೀರಿನ ಯೋಜನೆಗೆ ಇಂದು ಸಿಎಂ ಚಾಲನೆ, ಡಿಸಿಎಂ ಲೋಕಾರ್ಪಣೆ: ಇಲ್ಲಿದೆ ಹೈಲೈಟ್ಸ್