ದಾವಣಗೆರೆ: ಇಲ್ಲಿನ ಹೆಬ್ಬಾಳ ಗ್ರಾಮದಲ್ಲಿ ವಿಪರೀತ ನೊಣಗಳ ಕಾಟ. ಅದೆಷ್ಟರ ಮಟ್ಟಿಗೆ ಅಂದರೆ, ಇಲ್ಲಿನ ಜನರು ಅಂಗಡಿ, ಹೋಟೆಲ್ ಮುಚ್ಚುವ ಪರಿಸ್ಥಿತಿ ಬಂದಿದೆ. ಗ್ರಾಮಸ್ಥರ ಆರೋಗ್ಯದ ಮೇಲೂ ಈ ನೊಣಗಳು ಕೆಟ್ಟ ಪರಿಣಾಮ ಬೀರುತ್ತಿವೆ.
ಗ್ರಾಮದಲ್ಲಿದೆ ಏಳು ಪೌಲ್ಟ್ರಿ ಫಾರಂಗಳು: ದಾವಣಗೆರೆ ತಾಲೂಕಿನ ಹೆಬ್ಬಾಳ 7 ಪೌಲ್ಟ್ರಿ ಫಾರಂಗಳ ನಡುವೆ ಇರುವ ಗ್ರಾಮ. ಹೀಗಾಗಿ, ಗ್ರಾಮ ನೊಣಗಳಿಂದ ನಲುಗಿ ಹೋಗಿದೆ. ಗುಂಪು ಗುಂಪಾಗಿ ಪೌಲ್ಟ್ರಿ ಫಾರಂನಿಂದ ನೇರವಾಗಿ ಗ್ರಾಮಕ್ಕೆ ಲಗ್ಗೆಯಿಡುವ ನೊಣಗಳಿಂದ ಜನ ರೋಸಿ ಹೋಗಿದ್ದಾರೆ.
2015ರಿಂದ ಈ ಸಮಸ್ಯೆ ಉದ್ಭವಿಸಿದೆ. ಜಿಲ್ಲಾಧಿಕಾರಿಗಳು ಬಂದರೂ ಕೂಡ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂಬುದು ಜನರ ಅಳಲು. ಬೇಕರಿ, ದಿನಸಿ ಅಂಗಡಿ, ಹೋಟೆಲ್ ಹೀಗೆ ಎಲ್ಲೆಂದರಲ್ಲಿ ನೊಣಗಳು ಕಾಣಸಿಗುತ್ತಿವೆ. ಇದು ಅಂಗಡಿ ಮಾಲೀಕರ ತಲೆಬಿಸಿ ಹೆಚ್ಚಿಸಿದೆ.
"ತಿಂಡಿ, ಮಿರ್ಚಿ, ಟೀ, ನೀರು ಹೀಗೆ ಎಲ್ಲಿ ನೋಡಿದರೂ ನಿಮಗೆ ನೊಣಗಳೇ ಕಾಣುತ್ತವೆ. ಆಹಾರ ಸೇವಿಸುವಾಗ ನೊಣಗಳು ಬೀಳುವುದು, ಕುಳಿತುಕೊಳ್ಳುವುದರಿಂದ ಗ್ರಾಹಕರು ಹೋಟೆಲ್ಗೆ ಬರಲು ಹಿಂದೇಟು ಹಾಕುತ್ತಿದ್ದಾರೆ" ಎಂದು ಓರ್ವ ಹೋಟೆಲ್ ಮಾಲೀಕರು ಅಳಲು ತೋಡಿಕೊಂಡಿದ್ದಾರೆ.
"ಈ ನೊಣಗಳಿಂದಾಗಿ ನಮಗೆ ಹೋಟೆಲ್ ನಡೆಸುವುದೇ ಒಂದು ಸವಾಲಾಗಿದೆ. ಗ್ರಾಹಕರು ಹೋಟೆಲ್ಗೆ ಬರುವುದನ್ನು ನಿಲ್ಲಿಸಿದ್ದಾರೆ. ತಯಾರಿಸಿದ ತಿಂಡಿ ಹಾಗೇ ಉಳಿಯುತ್ತಿದೆ. ಹಳ್ಳಿಯ ಗ್ರಾಹಕರಿದ್ದರೆ ಹೊಂದಿಕೊಂಡು ತಿಂದು ಹೋಗುತ್ತಾರೆ. ಆದರೆ ಅಫೀಶಿಯಲ್ಸ್ ಮಾತ್ರ ಇದಕ್ಕೆ ಒಪ್ಪುವುದಿಲ್ಲ. ಈಗಾಗಲೇ ಮೂರ್ನಾಲ್ಕು ಹೋಟೆಲ್, ಬೇಕರಿ ಬಂದ್ ಆಗಿದೆ" ಎನ್ನುತ್ತಾರೆ ಹೋಟೆಲ್ ಮಾಲೀಕ ರುದ್ರೇಶ್.
"ಹೆಬ್ಬಾಳ ಟೋಲ್ ಬಳಿ ಆರು ಫೈನಾನ್ಸ್ ತೆಗೆದುಕೊಂಡು ಸಣ್ಣ ಹೋಟೆಲ್ ನಡೆಸುತ್ತಿದ್ದೇನೆ. ಬರುವ ಗ್ರಾಹಕರು ನೊಣಗಳನ್ನು ನೋಡಿ ವಾಪಸ್ ಹೋಗುತ್ತಿದ್ದಾರೆ. ಟೀ, ತಿಂಡಿಯಲ್ಲಿ ನೊಣಗಳು ಬೀಳುತ್ತಿರುವುದರಿಂದ ನೀನೇ ನೊಣಗಳನ್ನು ಸಾಕಿದ್ದಿಯಾ? ಎಂದು ಕೇಳುತ್ತಾರೆ. ನಾವೇನು ಮಾಡ್ಬೇಕು ಹೇಳಿ?" ಎಂದು ಮತ್ತೋರ್ವ ಹೋಟೆಲ್ ಮಾಲೀಕ ಕರಿಬಸಮ್ಮ ಹೇಳಿದರು.
ಡಿಸಿಗೆ ದೂರು ನೀಡಲು ಚಿಂತನೆ: ಈ ಸಮಸ್ಯೆ ಬಗೆಹರಿಸುವಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆಸುತ್ತಿದ್ದೇವೆ. ಪೌಲ್ಟ್ರಿ ಫಾರಂ ಮಾಲೀಕರ ವಿರುದ್ಧವೂ ಗ್ರಾಮಾಂತರ ಪೊಲೀಸರಿಗೆ ಮನವಿ ಸಲ್ಲಿಸುತ್ತೇವೆ" ಎಂದು ಹೆಬ್ಬಾಳ ಗ್ರಾಮಸ್ಥ ವಿಜಯ್ ತಿಳಿಸಿದರು.
ಇದನ್ನೂ ಓದಿ: ಮಲೆನಾಡು ಕರಾವಳಿಯ ಕೀಟ ಬಾಧೆ ಇದೀಗ ಬಯಲುಸೀಮೆಗೆ ಲಗ್ಗೆ...