ಬೆಂಗಳೂರು: ಅಪಘಾತ ತಪ್ಪಿಸಲು ಹೋಗಿ ನಿಯಂತ್ರಣ ಕಳೆದುಕೊಂಡ ಬಿಎಂಟಿಸಿ ಬಸ್, ಪಕ್ಕದಲ್ಲಿ ನಿಂತಿದ್ದ ಪಾದಚಾರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಪಾದಚಾರಿ ಮೃತಪಟ್ಟಿದ್ದಾನೆ. ಆಂಧ್ರ ಮೂಲದ ಕೆಬಿ ಪ್ರಸಾದ್ ರಾವ್ (60) ಮೃತ ವ್ಯಕ್ತಿ. ಘಟನೆ ಆನೇಕಲ್ ತಾಲೂಕಿನ ಬನ್ನೇರುಘಟ್ಟ ಮುಖ್ಯ ರಸ್ತೆಯಲ್ಲಿ ಗುರುವಾರ ನಡೆದಿದೆ.
ಬಸ್ ಡಿಕ್ಕಿ ಹೊಡೆದ ತಕ್ಷಣ ಪ್ರಸಾದ್ ರಾವ್ ಅವರನ್ನು ಜಿಗಣಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಬನ್ನೇರುಘಟ್ಟ ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಬೆಂಗಳೂರಿನಿಂದ ಗುರುವಾರ ಮಧ್ಯಾಹ್ನ ಜಿಗಣಿ ಕಡೆಗೆ ಬರುತ್ತಿದ್ದ ಬಿಎಂಟಿಸಿ ಬಸ್, ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ಆ್ಯಕ್ಟಿವಾ ಬೈಕಿಗೆ ಡಿಕ್ಕಿ ಹೊಡೆದಿದೆ. ಬೈಕ್ ಮೇಲೆ ಹತ್ತಿದ್ದರಿಂದ ಬಸ್ನಡಿ ಸಿಲುಕಿದ ತಕ್ಷಣ ಬೈಕ್ ಸವಾರ ಬಲಗಡೆಗೆ ಉರುಳಿ ತಪ್ಪಿಸಿಕೊಂಡಿದ್ದಾನೆ. ಬಸ್ ಚಾಲಕ ಗಾಬರಿಯಾಗಿ ಎಡಕ್ಕೆ ಬಸ್ ಚಲಾಯಿಸಿದ್ದಾನೆ.
ಎರಡು ಬೈಕ್ ಹಾಗೂ ಟಾಟಾ ಏಸ್ ವಾಹನಕ್ಕೆ ಡಿಕ್ಕಿ ಹೊಡೆದ ಬಿಎಂಟಿಸಿ ಬಸ್ ನಂತರ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ. ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಂಬ ಮುರಿದು ವಾಹನಗಳ ಮೇಲೆ ಮುರಿದು ಬಿದ್ದಿದೆ. ವಿದ್ಯುತ್ ತಂತಿ ಯಾವ ವಾಹನಕ್ಕೂ ಸೋಕದ ಪರಿಣಾಮ ಬಸ್ನಲ್ಲಿದ್ದ ಪ್ರಯಾಣಿಕರು ಬದುಕುಳಿದಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಬಂದ ಕೆಇಬಿ ಸಿಬ್ಬಂದಿ, ವಿದ್ಯುತ್ ಹರಿವು ನಿಲ್ಲಿಸಿ ತಂತಿಗಳನ್ನು ತೆರವುಗೊಳಿಸಿದ್ದಾರೆ. ಬಸ್ ಚಾಲಕನನ್ನು ಬಂಧಿಸಿರುವ ಬನ್ನೇರುಘಟ್ಟ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಹಾವೇರಿ: ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣ; ಹೂತಿದ್ದ ಶವ ಹೊರತೆಗೆಯಲು ಮುಂದಾದ ಪೊಲೀಸರು - Haveri Student Suicide Case