ಕಾರವಾರ: ಪಂಚಮಸಾಲಿ ಮೀಸಲಾತಿ ಹೋರಾಟ ಸಂಬಂಧ ಕೂಡಲ ಸಂಗಮದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಕಾರವಾರದಲ್ಲಿ ಮಂಗಳವಾರ ಈ ಬಗ್ಗೆ ಮಾತನಾಡಿದ ಅವರು, "ಪಂಚಮಸಾಲಿ ಮೀಸಲಾತಿ ಸಂಬಂಧ ಅರ್ಧಕ್ಕೆ ನಿಂತಿರುವ ಹೋರಾಟದ ಬಗ್ಗೆ ಮೇ 23ರಂದು ಜೋಯಿಡಾ ತಾಲೂಕಿನ ಉಳವಿಯಲ್ಲಿ ಸಂಕಲ್ಪ ಸಭೆ ನಡೆಸಲಾಗುತ್ತಿದೆ. ನಮ್ಮ ಅಸಮಾಧಾನ, ಬೇಸರ ಮುಂದೆ ಉಗ್ರ ಹೋರಾಟವಾಗಿ ಪರಿವರ್ತನೆಯಾಗುವ ಮೊದಲು ಸರ್ಕಾರ ನ್ಯಾಯ ಕೊಡುವ ಕೆಲಸ ಮಾಡಲಿ" ಎಂದರು.
"ಇನ್ನೂ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ಪ್ರಾರಂಭಿಸುತ್ತೇವೆ. ಈ ಹೋರಾಟ ಮುಗಿಯುವುದರೊಳಗಾಗಿ ಸೂಕ್ತ ಪರಿಹಾರ ಕೊಡದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ. ನಮ್ಮ ಜನಾಂಗದ ಶಾಸಕರು ಅಧಿವೇಶನದಲ್ಲಿ ಒತ್ತಾಯಿಸಬೇಕು. ಇಲ್ಲದಿದ್ದರೆ ನಮ್ಮ ಜನರು ಇಟ್ಟ ಭರವಸೆ ಕಳೆದುಕೊಳ್ಳುವ ಸಂದರ್ಭ ಬರಬಹುದು. ಶಾಸಕರು ನಮ್ಮ ಜನಾಂಗದ ಋಣ ತೀರಿಸಲಿ. ಸಿಎಂ ಸಿದ್ದರಾಮಯ್ಯನವರು ಸ್ಪಂದಿಸುವ ಕೆಲಸವನ್ನಾದರೂ ಮಾಡಬೇಕಿತ್ತು. ನಮ್ಮ ಶಾಂತಿ, ಸಹನೆ ಪರೀಕ್ಷೆ ಮಾಡುವ ಕೆಲಸ ಮಾಡಿದರೆ ಅನಿವಾರ್ಯವಾಗಿ ಉಗ್ರ ಹೋರಾಟ ಮಾಡುವ ಸಂದರ್ಭ ಬರಲಿದೆ. ಸರ್ಕಾರ ಮಾತು ಕೊಟ್ಟು ವಿಳಂಬ ಮಾಡಿದೆ. ಸಿದ್ದರಾಮಯ್ಯನವರು ನಮ್ಮ ಸಮಾಜದ ಋಣ ತೀರಿಸುವ ಕೆಲಸ ಮಾಡಲಿ" ಎಂದರು.
"ಕಳೆದ 2023ರಲ್ಲಿ ಸರಕಾರ ವಿಶೇಷವಾಗಿ 2ಡಿ ಮೀಸಲಾತಿ ನೀಡಿದ್ದರೂ, ಅನುಷ್ಠಾನವಾಗುವ ಸಮಯದಲ್ಲಿ ನೀತಿ ಸಂಹಿತೆ ಎದುರಾಗಿತ್ತು. ಬಳಿಕ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಸಭೆ ನಡೆಸಿ ತೀರ್ಮಾನಿಸುತ್ತೇವೆ ಎಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ನಿರ್ಲಕ್ಷ್ಯ ಮಾಡಿದ್ದಾರೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಹೋರಾಟಕ್ಕೆ ಅಡ್ಡಿಯಾಗಿತ್ತು. ಹೀಗಾಗಿ ಉಳವಿಯಿಂದ ಮತ್ತೆ ಹೋರಾಟ ಪ್ರಾರಂಭಿಸುತ್ತೇವೆ" ಎಂದು ಹೇಳಿದರು.
"ಈ ಹಿಂದೆ ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಶಾಂತಿಯುತ ಹೋರಾಟ ಮಾಡಿದ್ದೆವು. ಬಳಿಕ ಹೋರಾಟ ತೀವ್ರಗೊಳಿಸಿದ್ದಕ್ಕೆ ಅನೇಕ ರಾಜಕೀಯ ಬದಲಾವಣೆಗಳಾಗಿದ್ದವು. ಈಗಲೂ ಶಾಂತಿಯುತವಾಗಿಯೇ ಹೋರಾಟ ಮಾಡಲಿದ್ದೇವೆ. ಸರಕಾರ ಮಣಿಯದಿದ್ದರೆ ಹೋರಾಟವನ್ನು ಉಗ್ರ ರೂಪಕ್ಕೆ ಕೊಂಡೊಯ್ಯಬೇಕಾಗುತ್ತದೆ. ಉಳವಿಯಲ್ಲಿ ಮಧ್ಯಾಹ್ನ 3 ಗಂಟೆಗೆ ಸಭೆ ನಡೆಯಲಿದೆ. ಈ ಸಭೆಯಲ್ಲಿ ರಾಷ್ಟ್ರ, ರಾಜ್ಯ ಹಾಗೂ ಜಿಲ್ಲಾ ಮಟ್ಟದ ಪದಾಧಿಕಾರಿಗಳು ಮಾತ್ರ ಭಾಗವಹಿಸಲಿದ್ದಾರೆ. ಸದ್ಯ ಪದಾಧಿಕಾರಿಗಳು ಹಾಗೂ ಭಕ್ತರು ಮಾತ್ರ ಹೋರಾಟ ಮಾಡಲಿದ್ದು ನೀತಿ ಸಂಹಿತೆ ಮುಗಿದ ಬಳಿಕ ರಾಜಕೀಯ ನಾಯಕರು ಭಾಗವಹಿಸುತ್ತಾರೆ" ಎಂಬ ಮಾಹಿತಿ ನೀಡಿದರು.
ಇದನ್ನೂ ಓದಿ: ಅಂಜಲಿ ಕೊಲೆ ಪ್ರಕರಣ: ಹುಬ್ಬಳ್ಳಿಯಲ್ಲಿ ಬೀಡುಬಿಟ್ಟ ಸಿಐಡಿ, ತನಿಖೆ ಚುರುಕು - Anjali Murder Probe