ಬೆಂಗಳೂರು: ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಸಿಇಟಿ ಪರೀಕ್ಷೆಯಲ್ಲಿ ಕೇಳಿದ್ದ ಆರೋಪದಿಂದ ಸೃಷ್ಟಿಯಾಗಿದ್ದ ಗೊಂದಲಕ್ಕೆ ಉನ್ನತ ಶಿಕ್ಷಣ ಇಲಾಖೆ ತೆರೆ ಎಳೆದಿದೆ. ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಮೌಲ್ಯ ಮಾಪನಕ್ಕೆ ಪರಿಗಣಿಸಲ್ಲ, ಕೃಪಾಂಕಗಳ ನೀಡುವ ಮೂಲಕ ಮೌಲ್ಯಮಾಪನ ನಡೆಸಲಿದ್ದೇವೆ. ಕೆಸಿಇಟಿ 2024ಕ್ಕೆ ಮರು ಪರೀಕ್ಷೆ ನಡೆಸಲ್ಲ, ಈಗಾಗಲೇ ನಿಗದಿಯಾದ ರೀತಿ ಮೇ ಅಂತ್ಯದಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ ಎಂದು ಉನ್ನತ ಶಿಕ್ಷಣ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 18 ಮತ್ತು 19 ರಂದು ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತ ಮತ್ತು ಜೀವಶಾಸ್ತ್ರ ವಿಷಯಗಳಿಗೆ ಪರೀಕ್ಷೆ ನಡೆಸಿದೆ. 3 ಲಕ್ಷಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ರಾಜ್ಯಾದ್ಯಂತ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆ ನಂತರ ಮಾಧ್ಯಮಗಳಲ್ಲಿ ಅನೇಕ ಪ್ರಶ್ನೆಗಳು ಪಠ್ಯಕ್ರಮದ ಹೊರತಾಗಿ ಬಂದಿರುವುದಾಗಿ ವರದಿಯಾಗಿದೆ. ಪಠ್ಯಕ್ರಮದ ಹೊರತಾಗಿ ಅನೇಕ ಪ್ರಶ್ನೆಗಳಿರುವುದಾಗಿ ಹಾಗೂ ಇದರಿಂದ ವಿದ್ಯಾರ್ಥಿಗಳು ಬಾಧಿತರಾಗಿರುವಾಗಿ ಮನವಿ ಸ್ವೀಕೃತವಾಗಿರುತದೆ. ಕೃಪಾಂಕ, ಮೌಲ್ಯಮಾಪನದಿಂದ ಪ್ರಶ್ನೆಗಳನ್ನು ಹೊರತುಪಡಿಸುವುದು ಅಥವಾ ಮರು ಪರೀಕ್ಷೆ ನಡೆಸುವ ಬಗ್ಗೆ ಬೇಡಿಕೆಗಳನ್ನು ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಪಠ್ಯಕ್ರಮದ ಹೊರತಾದ ಪ್ರಶ್ನೆಗಳ ಬಗ್ಗೆ ಪರಿಶೀಲಿಸಲು ಪರಿಣಿತರ ಸಮಿತಿಯನ್ನು ರಚಿಸಲಾಯಿತು. ಪರಿಣಿತರ ಸಮಿತಿಯು ವರದಿಯನ್ನು ಸಲ್ಲಿಸಿದೆ. ಪರಿಣತರ ಸಮಿತಿಯ ನೀಡಿದ ವರದಿಯ ಆಧಾರದ ಮೇಲೆ ಉನ್ನತ ಶಿಕ್ಷಣ ಇಲಾಖೆ ಈಗ ಕ್ರಮ ಕೈಗೊಂಡಿದೆ.
ಪರಿಣಿತ ಸಮಿತಿಯ ವರದಿಯನ್ನು ಗಮನದಲ್ಲಿರಿಸಿಕೊಂಡು ಅಭ್ಯರ್ಥಿಗಳ ಹಿತದೃಷ್ಟಿಯಿಂದ ಕೆಇಎಗೆ 2023-24 ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಹೊರತುಪಡಿಸಿ ಉಳಿದ ಪ್ರಶ್ನೆಗಳನ್ನು ಮಾತ್ರ ಮೌಲ್ಯ ಮಾಪನ ಮಾಡಲು ನಿರ್ಧರಿಸಿದೆ. ಅದರಂತೆ ಭೌತಶಾಸ್ತ್ರ- 9, ರಸಾಯನ ಶಾಸ್ತ್ರ-15, ಗಣಿತ-15, ಜೀವಶಾಸ್ತ್ರ-11 ಪ್ರಶ್ನೆಗಳನ್ನು ಮೌಲ್ಯ ಮಾಪನದಿಂದ ಹೊರಗಿಡಲಾಗುತ್ತಿದೆ. ಹಾಗಾಗಿ ಸರ್ಕಾರವು ಕೆಸಿಇಟಿ 2024 ಕ್ಕೆ ಯಾವುದೇ ಮರುಪರೀಕ್ಷೆ ಇರುವುದಿಲ್ಲ ಎಂದು ತೀರ್ಮಾನಿಸಿದೆ. ಮೇ ಮತ್ತು ಜೂನ್ ತಿಂಗಳಲ್ಲಿ ಕಾಮೆಡ್ ಕೆ, ಜೆಇಇ ಮುಖ್ಯ ಪರೀಕ್ಷೆ, ನೀಟ್, ದ್ವಿತೀಯ ಪಿಯುಸಿಯ ಎರಡನೇ ಮತ್ತು ಮೂರನೇ ಪರೀಕ್ಷೆಗಳು ನಡೆಯುತ್ತವೆ. ಸರ್ಕಾರವು ಈ ಹಂತದಲ್ಲಿ ಮರು ಪರೀಕ್ಷೆ ನಡೆಸುವುದು ಸೂಕ್ತ ಇಲ್ಲ ಎಂದು ನಿರ್ಧರಿಸಿದೆ.
ಇದನ್ನೂ ಓದಿ: ಕೆಲ ವರ್ಷಗಳ ಹಿಂದೆ ತಂದೆ ನಿಧನ, ಕುಟುಂಬದ ನೊಗ ಹೊತ್ತು ಸಾಗಿದ ತಾಯಿ; ಛಲ ಬಿಡದೇ ಐಎಎಸ್ ಪಾಸ್ ಆದ ಮಗ - SUCCESS STORY
ಇಂತಹ ಘಟನೆಗಳು ಭವಿಷ್ಯದಲ್ಲಿ ಮರುಕಳಿಸದಂತೆ ಕೆಇಎ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಪಡಿಸಲು ನಿಗದಿತ ಮಾನ ದಂಡಗಳನ್ನು ರೂಪಿಸಬೇಕು ಎನ್ನುವ ಸ್ಪಷ್ಟ ನಿರ್ದೇಶನ ನೀಡಲಾಗಿದೆ. ಜೊತೆಗೆ ಈ ಬಾರಿ ಕೃಪಾಂಕದೊಂದಿಗೆ ಪಠ್ಯಕ್ರಮದ ಹೊರತಾದ ಪ್ರಶ್ನೆಗಳನ್ನು ಹೊರತುಪಡಿಸಿ ಉಳಿಕೆ ಪ್ರಶ್ನೆಗಳ ಆಧಾರದ ಮೇಲೆ ಮೌಲ್ಯ ಮಾಪನ ನಡೆಸಬೇಕು. ಸಿಇಟಿ ಫಲಿತಾಂಶವು ಈಗಾಗಲೇ ನಿಗದಿ ಪಡಿಸಿರುವಂತೆ ಮೇ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಬೇಕು ಎನ್ನುವ ಆದೇಶವನ್ನು ಉನ್ನತ ಶಿಕ್ಷಣ ಇಲಾಖೆ ಹೊರಡಿಸಿದೆ.
ಇದನ್ನೂ ಓದಿ: ಜೆಇಇ ಫಲಿತಾಂಶ ಪ್ರಕಟ: 56 ವಿದ್ಯಾರ್ಥಿಗಳಿಗೆ 100ಕ್ಕೆ 100 ಅಂಕ.. ಟಾಪರ್ಸ್ ಲಿಸ್ಟ್ನಲ್ಲಿ ಕರ್ನಾಟಕದ ಮೂವರು! - JEE Result