ಬೆಂಗಳೂರು: ಕನ್ನಡ ರಾಜ್ಯೋತ್ಸವದಂದು ಬೆಂಗಳೂರಿನ ಎಲ್ಲ ಶಾಲೆ, ಕಾಲೇಜು, ಐಟಿ, ಬಿಟಿ ಕಂಪನಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ಕನ್ನಡದ ಬಾವುಟ ಹಾರಿಸುವಂತೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನಿರ್ದೇಶನ ನೀಡಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನವೆಂಬರ್ 1ರ ರಾಜ್ಯೋತ್ಸವ ದಿನದಂದು ಬೆಂಗಳೂರು ನಗರದ ಎಲ್ಲಾ ಸಂಘ ಸಂಸ್ಥೆಗಳು, ವಿದ್ಯಾಸಂಸ್ಥೆಗಳು, ಕಾರ್ಖಾನೆಗಳು ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಲ್ಲಿ ಕನ್ನಡದ ಬಗ್ಗೆ ಪ್ರೀತಿ, ವಿಶ್ವಾಸ ಮೂಡಿಸುವ ಕೆಲಸ ಆಗಬೇಕು. ಬೆಂಗಳೂರಲ್ಲಿ ಸುಮಾರು ಶೇ.50ರಷ್ಟು ಮಂದಿ ಹೊರ ರಾಜ್ಯದವರು ಇದ್ದಾರೆ. ಅವರೆಲ್ಲರೂ ಕನ್ನಡಕ್ಕೆ ಆದ್ಯತೆ ನೀಡಬೇಕು. ವಿದ್ಯಾಸಂಸ್ಥೆಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ನಡೆಸುವಂತೆ ನಿರ್ದೇಶನ ನೀಡಿದ್ದೇನೆ ಎಂದರು.
ಐಟಿ, ಬಿಟಿ, ಖಾಸಗಿ ಸಂಸ್ಥೆಗಳು ತಮ್ಮ ಕಟ್ಟಡದ ಮೇಲೆ ಬಾವುಟ ಹಾರಿಸಿ, ಕನ್ನಡಕ್ಕೆ ಗೌರವ ಸಲ್ಲಿಸಬೇಕು. ಕನ್ನಡ ಬಾವುಟ ಹಾರಿಸಿರುವ ಫೋಟೋವನ್ನು ತೆಗೆದು ಬಿಬಿಎಂಪಿಯ ದೂರವಾಣಿ ಸಂಖ್ಯೆಗೆ ಪೋಸ್ಟ್ ಮಾಡಬೇಕು. ಕರುನಾಡಿನಲ್ಲಿ ಕನ್ನಡ ಕಲಿಯುವುದು ಎಲ್ಲರ ಕರ್ತವ್ಯ. ಎಲ್ಲಾ ಖಾಸಗಿ ಸಂಸ್ಥೆಗಳಿಗೆ ಕಡ್ಡಾಯವಾಗಿ ಕನ್ನಡ ಬಾವುಟ ಹಾರಿಸಲು ಮನವಿ ಮಾಡುತ್ತೇನೆ ಎಂದು ತಿಳಿಸಿದರು.
ಸ್ವಯಂ ಪ್ರೇರಿತರಾಗಿ ಕನ್ನಡದ ಬಾವುಟ ಹಾರಿಸಿ: ಕಡ್ಡಾಯ ಕನ್ನಡ ಬಾವುಟ ಹಾರಿಸುವ ಆದೇಶ ಹೊರಡಿಸುವ ಹಿನ್ನೆಲೆ ಕನ್ನಡ ಪರ ಕಾರ್ಯಕರ್ತರು ಖಾಸಗಿ ಸಂಸ್ಥೆ, ಕಂಪನಿಗಳಿಗೆ ತೆರಳಿ ಗಲಾಟೆ ಮಾಡಬಾರದು. ಯಾರೂ ಹೆದರಿಸಿ, ಬೆದರಿಸಿ ಬಾವುಟ ಹಾಕಿಸುವ ಹಾಗಿಲ್ಲ. ಆ ತರ ಮಾಡಿದರೆ ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಸ್ವಯಂ ಪ್ರೇರಿತರಾಗಿ ಎಲ್ಲರೂ ಕನ್ನಡ ಬಾವುಟ ಹಾರಿಸುತ್ತಾರೆ. ರಾಜ್ಯ ಸರ್ಕಾರವೇ ಕನ್ನಡ ಬಾವುಟ ಹಾರಿಸುವಂತೆ ಮನವಿ ಮಾಡುತ್ತಿದೆ. ಆ ಮೂಲಕ ಕನ್ನಡಕ್ಕೆ ಗೌರವ ಸಲ್ಲಿಸಬೇಕು ಎಂದು ಡಿಸಿಎಂ ಕರೆ ನೀಡಿದರು.
ಇದನ್ನೂ ಓದಿ: ರಾಜ್ಯವನ್ನು ವಾಮ ಮಾರ್ಗ, ಮೋಸದಿಂದ ಸ್ಥಿರಗೊಳಿಸುವ ಸರ್ಕಾರ ಕಾಂಗ್ರೆಸ್: ಹೆಚ್.ಡಿ. ಕುಮಾರಸ್ವಾಮಿ