ಬೆಂಗಳೂರು : ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ. ಮಂಜುನಾಥ್ ರಾಜಕೀಯ ಪ್ರವೇಶಕ್ಕೆ ಸಮ್ಮತಿಸಿದ್ದು, ಬಿಜೆಪಿ ಮೂಲಕ ರಾಜಕೀಯಕ್ಕೆ ಬರಲಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಸ್ಪಷ್ಟಪಡಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಾ. ಮಂಜುನಾಥ್ ಸಮಾಜ ಸೇವೆಯ ಕೆಲಸ ಮಾಡಿದ್ದಾರೆ. ಜಯದೇವ ಸಂಸ್ಥೆಯಲ್ಲಿ ಅವರ ಸೇವೆ ಅನನ್ಯವಾಗಿದೆ. ಅವರು ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆಯಾಗಿದೆ. ಮಂಜುನಾಥ್ ಅವರೊಂದಿಗೂ ಸಮಾಲೋಚನೆ ನಡೆಸಲಾಗಿದೆ. ಅವರು ಸ್ಪರ್ಧಿಸಲು ಒಪ್ಪಿದ್ದಾರೆ. ನಾಳೆ ಅವರು ಪಕ್ಷ ಸೇರುವ ಸಾಧ್ಯತೆ ಇದೆ. ಸೇರ್ಪಡೆ ಕುರಿತು ಪಕ್ಷದ ಕಚೇರಿಯಿಂದ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ತಿಳಿಸಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರಾಗಿರುವ ಮಾಜಿ ಸಿಎಂ ಡಿ ವಿ ಸದಾನಂದಗೌಡ ಪರ ಈಗಲೂ ನಾವೆಲ್ಲಾ ಇದ್ದೇವೆ. ಶೋಭಾ ಕರಂದ್ಲಾಜೆ ಅವರಿಗೆ ಈ ಕ್ಷೇತ್ರದ ಟಿಕೆಟ್ ನೀಡುವುದು ಬೇಡ ಎಂದು ಕೆಲ ಶಾಸಕರು ವಿರೋಧ ಮಾಡಿದ್ದಾರೆ. ಹಾಗಾಗಿ ನಾವು ಎಲ್ಲಾ ಶಾಸಕರು ಈಗಲೂ ಸದಾನಂದ ಗೌಡರ ಪರ ಇದ್ದೇವೆ. ನಾವು ಈಗಾಗಲೇ ಸದಾನಂದ ಗೌಡರಿಗೆ ಟಿಕೆಟ್ ನೀಡಬೇಕು ಎಂದು ಹೇಳಿದ್ದೇವೆ ಎಂದು ಬಹಿರಂಗವಾಗಿ ಬೆಂಗಳೂರು ಉತ್ತರಕ್ಕೆ ಶೋಭಾ ಕರಂದ್ಲಾಜೆ ಬರುವುದಕ್ಕೆ ಆರ್ ಅಶೋಕ್ ವಿರೋಧ ಎಂದರು.
ನಮ್ಮ ಆಯ್ಕೆ ಸದಾನಂದ ಗೌಡರೆ. ಉಳಿದ ನಿರ್ಧಾರ ಕೇಂದ್ರದ ನಾಯಕರದ್ದು. ಶೋಭಾ ಕರಂದ್ಲಾಜೆ ಅವರ ಸ್ಪರ್ಧೆ ನಿರ್ಧಾರ ಹೈಕಮಾಂಡ್‌ಗೆ ಬಿಟ್ಟ ವಿಚಾರ. ವರಿಷ್ಠರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ. ಆದರೆ ಟಿಕೆಟ್ ಸಿಗಲಿಲ್ಲ ಎಂದು ನಮ್ಮ ಪಕ್ಷದಲ್ಲಿ ಬಂಡಾಯ ಏಳುವ ಅಭ್ಯರ್ಥಿ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಎರಡು ಬಾರಿ ನನ್ನನ್ನು ಒಳಗೊಂಡಂತೆ ಯಡಿಯೂರಪ್ಪ, ಬೊಮ್ಮಾಯಿ, ವಿಜಯೇಂದ್ರ, ಪ್ರಲ್ಹಾದ್ ಜೋಶಿ ಎಲ್ಲರನ್ನೂ ಹೈಕಮಾಂಡ್ ನಾಯಕರು ದೆಹಲಿಗೆ ಕರೆಸಿದ್ದರು. ಅಮಿತ್ ಶಾ, ಜೆ ಪಿ ನಡ್ಡಾ ಅವರ ಜೊತೆ ಒಂದು ಸಭೆ ಆಗಿತ್ತು. ನಂತರ ಮೋದಿ ಅವರೂ ಸಭೆಗೆ ಬಂದರು. ಹೊಸಬರಿಗೆ ಅವಕಾಶ ನೀಡಲಾಗಿದೆ. ಹಳೆ ಬೇರು, ಹೊಸ ಚಿಗುರು ಇದು. ಬಿಜೆಪಿ ಪಕ್ಷದ ಟಿಕೆಟ್ ಸಿಗೋದಿಲ್ಲ ಅಂತ ಹೇಳಿಕೆ ಕೋಡೋದು ಸರಿಯಲ್ಲ. ನಿಮಗೆ ನೀವೇ ಊಹೆ ಮಾಡಿಕೊಳ್ಳಬೇಡಿ. ನಮಗೆ ಟಿಕೆಟ್ ಸಿಗುತ್ತೆ ಅಂತ ಭಾವಿಸಿ. 28ಕ್ಕೆ 28 ಸ್ಥಾನಗಳನ್ನು ಗೆಲ್ಲಬೇಕಿದೆ. ಅದಕ್ಕೆ ಕೆಲಸ ಮಾಡೋಣ ಎಂದು ಅಸಮಾಧಾನ ವ್ಯಕ್ತಪಡಿಸುತ್ತಿರುವ ನಾಯಕರಿಗೆ ಸಲಹೆ ನೀಡಿದರು.
ಹಾಲಿ ಬಿಜೆಪಿ ಸಂಸದರು ನಮ್ಮ ಸಂಪರ್ಕದಲ್ಲಿದ್ದಾರೆ ಅನ್ನೋ ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿಕೆಗೆ ಟಾಂಗ್ ನೀಡಿದ ಅಶೋಕ್, ಆರು ಜನ ನಮ್ಮ ಸಂಪರ್ಕದಲ್ಲಿದ್ದಾರೆ. ಅವರ ನಾಯಕರು ಯಾರು ಅಂತ ಹೇಳಬೇಕಲ್ವಾ.? ಮ್ಯಾಚ್ ಆಡೋಕೆ ಹೊರಟಿದ್ದೀರಿ. ಕ್ಯಾಪ್ಟನ್ ಯಾರು ಅಂತ ಹೇಳಬೇಕಲ್ವಾ? ಕ್ಯಾಪ್ಟನ್ ಯಾರು ಅಂತ ಹೇಳುವ ಯೋಗ್ಯತೆ ಇದ್ದರೆ ಬರಲಿ. ಇನ್ನೂ ಟಿಕೆಟ್ ಹಂಚಿಕೆಯೇ ಆಗಿಲ್ಲ. ಮೆಜಾರಿಟಿ ಬರೋಕೆ 272 ಬೇಕು. ಅಷ್ಟು ಸೀಟು ಅವರು ಸ್ಪರ್ಧೆಯೇ ಮಾಡ್ತಿಲ್ಲ. ಐಎನ್ಡಿಐಎ ಹುಟ್ಟು ಹಾಕಿದ್ದು ಯಾರು? ಅವರು ಈಗ ಎಲ್ಲಿದ್ದಾರೆ? ಎಂದು ಪ್ರಶ್ನಿಸಿದರು.
ಪೌರತ್ವ ಕೊಡುವುದು ಕೇಂದ್ರ ಸರ್ಕಾರ : ಕೇಂದ್ರ ಸರ್ಕಾರ ಜಾರಿಗೊಳಿಸಿದ ಸಿಎಎ ಕಾಯ್ದೆಯನ್ನ ಸ್ವಾಗತ ಮಾಡುತ್ತೇವೆ. ಕಾಂಗ್ರೆಸ್ ಕೋಮು ಭಾವನೆ ಸೃಷ್ಟಿ ಮಾಡೋಕೆ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಕಾಯ್ದೆಯಲ್ಲಿ ಸ್ಪಷ್ಟವಾಗಿ ಇದೆ. ನಮ್ಮ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುವುದಿಲ್ಲ. ಬೇರೆ ದೇಶದ ಅಲ್ಪಸಂಖ್ಯಾತರಿಗೆ ಇದು ಅನ್ವಯ ಆಗುತ್ತದೆ. ಕಾಂಗ್ರೆಸ್ಗೆ ಮಾನವೀಯತೆಯ ಕೊರತೆ ಇದೆ. ಕಾಂಗ್ರೆಸ್ಗೆ ಕಾಮಾಲೆ ಕಣ್ಣು ಅಲ್ಪಸಂಖ್ಯಾತ ಮತ ಓಲೈಕೆಗಾಗಿ ಸಿಎಎ ವಿರೋಧ ಮಾಡುತ್ತಿದೆ. ಇದು ಕೇಂದ್ರದ ಕಾಯ್ದೆ. ಯಾರು ಒಪ್ಪಲಿ ಬಿಡಲಿ, ದೇಶದಲ್ಲಿ ಈ ಕಾಯ್ದೆ ಜಾರಿ ಮಾಡಲಿದೆ. ಪೌರತ್ವ ಕೊಡುವುದು ಕೇಂದ್ರ ಸರ್ಕಾರ ಎಂದರು.
ಕುಡಿಯುವ ನೀರಿಗೆ ಹಾಹಾಕಾರ ಸೃಷ್ಟಿಯಾಗಿದೆ. ಆಸ್ಪತ್ರೆಗಳಲ್ಲೂ ಕುಡಿಯುವ ನೀರಿನ ಸಮಸ್ಯೆ ಆಗಿದೆ. ಕಮರ್ಷಿಯಲ್ ನಲ್ಲಿ ಆಸ್ಪತ್ರೆ ಕೂಡ ಬರಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಯೋಗ್ಯತೆ ಸರ್ಕಾರಕ್ಕಿಲ್ಲ. ದೆಹಲಿಯಲ್ಲಿ ಹೋಗಿ ಕುಳಿತು ಸಚಿವರು ಮಾಹಿತಿ ಕೊಟ್ಟಿದ್ದರೆ ಈ ಪರಿಸ್ಥಿತಿ ಬರ್ತಿರಲಿಲ್ಲ. ತಮಿಳುನಾಡಿನಲ್ಲಿ ಅಲಯನ್ಸ್ ಆಗಿ, ಟಿಕೆಟ್ ಹಂಚಿಕೆ ಕೂಡ ಆಗಿದೆ. ಹೆಚ್ಚು ಸೀಟು ಪಡೆಯಲು ನೀರು ಬಿಟ್ಟಿದ್ದಾರೆ ಅನ್ನೋದು ನನ್ನ ನೇರ ಆರೋಪ. ಟ್ರಿಬ್ಯೂನಲ್ ಆದೇಶ ಬರುವ ಮೊದಲೇ ನೀರು ಬಿಟ್ಟಿದ್ದರು. ಬೆಂಗಳೂರು, ಮಂಡ್ಯದಲ್ಲಿ ನೀರಿಗೆ ಹಾಹಾಕಾರ ಬಂದಿದ್ದರೆ ಅದರ ನೇರ ಹೊಣೆ ಕಾಂಗ್ರೆಸ್. ಜನ ಬೀದಿಗೆ ಬರೋ ರೀತಿ, ಗುಳೆ ಹೋಗೋ ರೀತಿ ಮಾಡಿದ್ದಾರೆ. ಬೆಂಗಳೂರಿಗೆ ಅಪಕೀರ್ತಿ ತಂದಿದ್ದಾರೆ ಎಂದು ಟೀಕಿಸಿದರು.
ಕೇಂದ್ರದ ಕೆಲಸವನ್ನ ನಮ್ಮದೇ ಅಂತ ತೋರಿಸುತ್ತಿದ್ದಾರೆ: ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಸುಳ್ಳು ಜಾಹೀರಾತು ನೀಡುತ್ತಿದೆ. ಕೇಂದ್ರದ ಕೆಲಸವನ್ನ ನಮ್ಮದೇ ಅಂತ ತೋರಿಸುತ್ತಿದ್ದಾರೆ. ಅಷ್ಟು ಬರಗೆಟ್ಟು, ಮತಿ ಇಲ್ಲದಂತಾಗಿದೆ. ಮುಂದೆ ಈ ರೀತಿ ಜಾಹೀರಾತು ನೀಡುವುದಾದರೆ ಮೋದಿ ಅವರ ಫೋಟೋವನ್ನೂ ಹಾಕಲಿ. ಅನ್ನಭಾಗ್ಯ ಅಂತ ಸಿದ್ದರಾಮಯ್ಯ ಹೇಳಿದ್ದರು. ಅದು ನಿಮ್ಮದಲ್ಲ, ಮೋದಿ ಅವರ ಯೋಜನೆ ಎಂದು ಕಾಂಗ್ರೆಸ್ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರ ಬೆಂಗಳೂರಿನ ಮಾನ ಮರ್ಯಾದೆ ಹರಾಜು ಹಾಕಿದೆ: ವಿಪಕ್ಷ ನಾಯಕ ಆರ್.ಅಶೋಕ್