ಮೈಸೂರು : ಮುಡಾ ಹಗರಣದ ತನಿಖೆಯನ್ನ ಸಿಬಿಐಗೆ ವಹಿಸಬೇಕು ಹಾಗೂ ಹಗರಣದಲ್ಲಿ ಭಾಗಿಯಾಗಿರುವ ಸಿದ್ದರಾಮಯ್ಯ ಕೂಡಲೇ ರಾಜೀನಾಮೆ ನೀಡಬೇಕೆಂದು ಬಿಜೆಪಿ ಮೈಸೂರಿನಲ್ಲಿ ನಡೆಸುತ್ತಿದ್ದ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಅಶ್ವತ್ಥ್ ನಾರಾಯಣ್ ಪೊಲೀಸರ ಕಣ್ಣ್ ತಪ್ಪಿಸಲು ಬೆಂಗಳೂರಿನಿಂದ ಗೂಡ್ಸ್ ಆಟೋದಲ್ಲಿ ಬಂದು ಪ್ರತಿಭಟನೆಯಲ್ಲಿ ಭಾಗವಹಿಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದರು.
ಇಂದು ಮೈಸೂರಿನಲ್ಲಿ ಮುಡಾ ಬಹುಕೋಟಿ ಹಗರಣವನ್ನ ಸಿಬಿಐ ತನಿಖೆಗೆ ವಹಿಸಬೇಕು ಹಾಗೂ ಸಿಎಂ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಬಿಜೆಪಿ ಮುಡಾ ಕಡೆ ಹೊರಟು ಮುಡಾಗೆ ಮುತ್ತಿಗೆ ಹಾಕಲು ಯತ್ನಿಸಿದ ಸಂದರ್ಭದಲ್ಲಿ ಮೈಸೂರು ಕೊಡಗು ಸಂಸದ ಯದುವೀರ್ ಒಡೆಯರ್, ಹಾಗೂ ಬಿಜೆಪಿ ಶಾಸಕ ಶ್ರೀವತ್ಸ ಅವರನ್ನು ಸೇರಿದಂತೆ ಸ್ಥಳೀಯ ನಾಯಕರು ಹಾಗೂ ಪ್ರಮುಖ ಕಾರ್ಯಕರ್ತರನ್ನ ಪೊಲೀಸರು ವಶಕ್ಕೆ ಪಡೆದುಕೊಂಡರು.
ಬೆಂಗಳೂರಿನಿಂದ ಗೂಡ್ಸ್ ಆಟೋದಲ್ಲಿ ಬಂದ ಆರ್. ಅಶೋಕ್ : ಮುಡಾ ಹಗರಣವನ್ನ ಖಂಡಿಸಿ ಮೈಸೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಹಲವು ನಾಯಕರನ್ನ ಬೆಂಗಳೂರಿನಲ್ಲೇ ಬೆಳಗ್ಗೆ ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆ ಮಾಡಿದ್ದಾರೆ.
ಅನಂತರ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಮಾಜಿಮಂತ್ರಿ ಹಾಗೂ ಶಾಸಕ ಅಶ್ವತ್ಥ್ ನಾರಾಯಣ್ ಪೊಲೀಸರು ಬಂಧಿಸಬಹುದು ಎಂಬ ಹಿನ್ನೆಲೆ ಬೆಂಗಳೂರಿನಿಂದ ಗೂಡ್ಸ್ ಆಟೋದಲ್ಲಿ ಮೈಸೂರಿಗೆ ಆಗಮಿಸಿ, ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂದರ್ಭದಲ್ಲಿ ಅವರನ್ನು ವಶಕ್ಕೆ ಪಡೆದರು.
ಉಪ್ಪು ತಿಂದವರು ನೀರು ಕುಡಿಯಲೇಬೇಕು : ವಾಲ್ಮೀಕಿ ನಿಗಮದಲ್ಲಿ ಹಣ ದುರುಪಯೋಗ ಆರೋಪ ಎದುರಿಸುತ್ತಿರುವ ಮಾಜಿ ಸಚಿವ ನಾಗೇಂದ್ರ ಅವರನ್ನ ಇಡಿ ವಶಕ್ಕೆ ಪಡೆದಿದೆ. ತಡವಾದರೂ ಸರಿ ನ್ಯಾಯ ಸಿಕ್ಕಿದೆ. ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಮೈಸೂರಿನ ಮುಡಾ ಬಹುಕೋಟಿ ಹಗರಣದಲ್ಲಿ ಅಂದಾಜು 2.000 ಸಾವಿರ ಕೋಟಿ ಭ್ರಷ್ಟಾಚಾರ ಆಗಿದೆ. ಇದರಲ್ಲಿ ಸಿಎಂ ಕುಟುಂಬದ ಪಾಲು ಇದೆ. ಕೂಡಲೇ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಪ್ರಕರಣವನ್ನು ಸಿಬಿಐ ತನಿಖೆಗೆ ಒಳ ಪಡಿಸಬೇಕು. ಈ ಬಗ್ಗೆ ಸದನದಲ್ಲಿ ಹೋರಾಟ ಮಾಡುವುದಾಗಿ ಆರ್. ಅಶೋಕ್ ಹೇಳಿದರು.
ಸರ್ಕಾರ ಹೋರಾಟದ ಹಕ್ಕನ್ನ ದಮನ ಮಾಡುತ್ತಿದೆ. ಮೈಸೂರಿಗೆ ಬೆಳಗ್ಗೆ ಬರುವಾಗಲೇ ನಮ್ಮನ್ನ ಬಂಧಿಸಿದ್ದಾರೆ. ಬಳಿಕ ಹೇಗೋ ತಪ್ಪಿಸಿಕೊಂಡು ಗೂಡ್ಸ್ ಆಟೋದಲ್ಲಿ ಪೊಲೀಸರ ಕಣ್ಣ್ ತಪ್ಪಿಸಿ ಮೈಸೂರಿಗೆ ಆಗಮಿಸಿದ್ದೇನೆ. ಕೂಡಲೇ ಮುಡಾ ಹಗರಣವನ್ನ ಸಿಬಿಐಗೆ ವಹಿಸಬೇಕೆಂದು ಆಗ್ರಹಿಸುತ್ತೇನೆ ಎಂದರು.
ಇದನ್ನೂ ಓದಿ : ಮುಡಾ ಹಗರಣ ಕೇಸ್ನಲ್ಲಿ ಬಿಜೆಪಿಯಿಂದ ಕಾನೂನು ಹೋರಾಟ: ಸಿಎಂಗೆ ಎಚ್ಚರಿಕೆ ನೀಡಿದ ಪಲ್ಹಾದ್ ಜೋಶಿ - Muda scam case