ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪದೆ ಪದೇ ವಿಧಾನಸೌಧವನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ, ನೀತಿ ಸಂಹಿತೆ ಜಾರಿಯಲ್ಲಿದ್ದರೂ ವಿಧಾನಸೌಧದಲ್ಲಿ ಪ್ರತಿಭಟನೆ ನಡೆಸಿದ್ದು, ಅಕ್ಷಮ್ಯ ಅಪರಾಧವಾಗಿದೆ. ಕ್ರಮ ಕೈಗೊಳ್ಳಬೇಕಾದ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಕಾಂಗ್ರೆಸ್ ನಾಯಕರ ಕೈಗೊಂಬೆಯಾಗಿದ್ದಾರೆ. ಹಾಗಾಗಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ವಿರುದ್ಧವೇ ಕ್ರಮ ಕೈಗೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಕರ್ನಾಟಕದ ಕಾಂಗ್ರೆಸ್ ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳುತ್ತಿದೆ. ಚುನಾವಣೆ ಸಂದರ್ಭದಲ್ಲಿ ವಿಧಾನಸೌಧ ಹೇಗಿರಬೇಕು ಅಂತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಕೇಂದ್ರ ಚುನಾವಣಾ ಆಯೋಗದಿಂದ ಆದೇಶ ಬಂದಿದೆ. ಆದರೆ ನಮ್ಮ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸ್ಥಾನದಲ್ಲಿ ಇರುವ ಅಧಿಕಾರಿಗಳು ಕಾಂಗ್ರೆಸ್ ಕೈಗೊಂಬೆ ಆಗಿದ್ದಾರೆ. ಕೇಂದ್ರ ಚುನಾವಣಾ ಆಯೋಗದ ಆದೇಶವನ್ನು ಸಿಎಸ್ ಪಾಲಿಸುತ್ತಿಲ್ಲ ಎಂದು ದೂರಿದರು.
ಡಿಸಿಎಂ ಡಿಕೆ ಶಿವಕುಮಾರ್ ಯಾರನ್ನೂ ಹೇಳಲ್ಲ ಕೇಳಲ್ಲ, ಅವರದ್ದೇ ಒಂದು ಗೂಂಡಾ ರಾಜ್ಯ. ವಿಧಾನಸೌಧದಲ್ಲಿನ ಅವರ ಕಚೇರಿಯಲ್ಲಿ ಮುಖಂಡರ ಪಕ್ಷ ಸೇರ್ಪಡೆ ಮಾಡಿಕೊಂಡಿದ್ದಾರೆ. ಇದರ ವಿರುದ್ಧ ಬಿಜೆಪಿಯಿಂದ ಸಿಎಸ್‌ಗೆ ದೂರು ನೀಡಲಾಗಿದೆ. ಕ್ರಮ ತೆಗೆದುಕೊಳ್ಳುವುದಾಗಿ ಸಿಎಸ್ ಹೇಳಿದ್ದರು. ಆದರೆ ಇದುವರೆಗೂ ಕ್ರಮ ತೆಗೆದುಕೊಂಡಿಲ್ಲ. ಇಂದು ವಿಧಾನಸೌಧದಲ್ಲಿ ಕಾಂಗ್ರೆಸ್ ಪ್ರತಿಭಟನೆ ಮಾಡಿದೆ, ಇದಕ್ಕೂ ಕೂಡ ಅವಕಾಶ ನೀಡುವಂತಿರಲಿಲ್ಲ. ಆದರೂ ಸಿಎಸ್ ಮೌನವಾಗಿದ್ದಾರೆ. ಇದುವರೆಗೂ ಎರಡು ಮೂರು ಬಾರಿ ನಿಯಮ ಉಲ್ಲಂಘನೆ ಆಗಿದೆ. ಒಂದು ಬಾರಿಯೂ ಸಿಎಸ್ ಕ್ರಮ ತೆಗೆದುಕೊಂಡಿಲ್ಲ. ಹಾಗಾಗಿ ಸಿಎಸ್ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗಕ್ಕೆ ದೂರು ನೀಡುತ್ತೇನೆ ಎಂದರು.
ಬರ ಪರಿಹಾರ ಬಿಡುಗಡೆಗೆ ಚುನಾವಣಾ ಮಾದರಿ ನೀತಿ ಸಂಹಿತೆ ಇದೆ. ಕೋರ್ಟ್ ಕೂಡ ಇದನ್ನೇ ಹೇಳಿದೆ. ನಿರ್ಮಲಾ ಸೀತಾರಾಮನ್ ಕೂಡ ಇದನ್ನೇ ಹೇಳಿದ್ದಾರೆ. ಚುನಾವಣಾ ಆಯೋಗ ಸೂಚಿಸಿದ ಕೂಡಲೇ ಬಿಡುಗಡೆ ಮಾಡುತ್ತೇವೆ ಅಂತ ಅಟಾರ್ನಿ ಜನರಲ್ ಕೂಡ ಹೇಳಿದ್ದಾರೆ. ಕೋರ್ಟ್ ಗಮನಕ್ಕೆ ತಂದಿದ್ದಾರೆ. ನಮ್ಮ ಸಾಲಿಸಿಟರಲ್ ಜನರಲ್ ಎಲ್ಲವನ್ನೂ ನ್ಯಾಯಾಲಯದ ಗಮನಕ್ಕೆ ತಂದಿದ್ದು, ನಾವು ಕ್ರಮ ತೆಗೆದುಕೊಳ್ಳುತ್ತೇವೆ ಅಂತ ಹೇಳಿದ್ದಾರೆ. ಮುಂದಿನ ಸೋಮವಾರಕ್ಕೆ ಕೇಸ್ ಮುಂದೂಡಿದ್ದಾರೆ. ಅದಕ್ಕೆ ಅವರ ವಕೀಲ ಕಪಿಲ್ ಸಿಬಲ್ ಕೂಡ ಇದಕ್ಕೆ ಒಪ್ಪಿದ್ದಾರೆ. ಆದರೆ ಇದನ್ನೇ ಕಾಂಗ್ರೆಸ್ ಜಯ ಆಗಿದೆ ಅಂತ ವಿಜಯೋತ್ಸವಕ್ಕೆ ಹೊರಟಿದ್ದಾರೆ. ಹಣ ಬಿಡುಗಡೆ ಮಾಡಬೇಕು ಅಂತ ಚುನಾವಣಾ ಆಯೋಗಕ್ಕೆ ಅಪೀಲು ಮಾಡಿರೋದು ನಾವು.
ಏನು ಜಯ ಆಯ್ತು ನಿಮಗೆ?. ನೀವಿಟ್ಟಿರುವ ಲಾಯರ್ ಏನು ವಾದ ಮಾಡಿದ್ದಾರೆ?. ಕೇಂದ್ರದ ಮನವಿಗೆ ಸರ್ವ ಸಮ್ಮತಿ ಇದೆ ಅಂತ ಒಪ್ಪಿಕೊಂಡಿದ್ದಾರೆ. ಬೇರೆ ಏನು ವಾದ ಮಾಡಿದ್ದಾರೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ವಿರುದ್ಧ ಪೋಸ್ಟರ್ ಬಿಡುಗಡೆ: ಇದೇ ವೇಳೆ ಕನ್ನಡಿಗರ ಕೈಗೆ ಚಿಪ್ಪು, ಕಾಂಗ್ರೆಸ್ ಸರ್ಕಾರದ ಕೊಡುಗೆ. ಡೇಂಜರ್ ಕಾಂಗ್ರೆಸ್ ಹೀಗೆ ವಿವಿಧ ಪೋಸ್ಟರ್ ಗಳನ್ನು ವಿಪಕ್ಷ ನಾಯಕ ಅಶೋಕ್, ಮಾಜಿ ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ, ಪಿ ರಾಜೀವ್ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದ್ಮೇಲೆ ಹಿಂದೂ ಸಮಾಜದ ಮೇಲೆ ಹಲ್ಲೆ ಸಹಜ: ಜೋಶಿ - Prahlad Joshi