ಬೆಂಗಳೂರು: ರಾಜ್ಯ ಸರ್ಕಾರದ ಮತ್ತೊಂದು ಪ್ರಸ್ತಾಪಿತ ತಿದ್ದುಪಡಿ ಕಾನೂನು ವಿವಾದಕ್ಕೆ ಕಾರಣವಾಗಿದೆ. ಐಟಿ ಕ್ಷೇತ್ರಗಳಲ್ಲಿ ದುಡಿಯುವ ಉದ್ಯೋಗಿಗಳ ಕೆಲಸದ ಅವಧಿಯನ್ನು ವಿಸ್ತರಿಸಲು ತಿದ್ದುಪಡಿ ಕಾಯ್ದೆ ತರಲು ಮುಂದಾಗಿರುವುದು ಕಾರ್ಮಿಕ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ.
ಈಗಾಗಲೇ ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲು ನೀಡುವ ವಿಧೇಯಕ ಮಂಡನೆ ಮಾಡಲು ಮುಂದಾಗಿದ್ದ ರಾಜ್ಯ ಸರ್ಕಾರದ ನಡೆ ಕೈಗಾರಿಕೋದ್ಯಮಿಗಳ ತೀವ್ರ ಟೀಕೆಗೆ ಗುರಿಯಾಗಿತ್ತು. ಇದೀಗ ರಾಜ್ಯ ಸರ್ಕಾರದ ಮತ್ತೊಂದು ಪ್ರಸ್ತಾಪಿತ ಕಾಯ್ದೆ ತಿದ್ದುಪಡಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಏನಿದು ಸರ್ಕಾರದ ಪ್ರಸ್ತಾಪಿತ ತಿದ್ದುಪಡಿ ಕಾಯ್ದೆ?: ರಾಜ್ಯ ಸರ್ಕಾರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆಗೆ ತಿದ್ದುಪಡಿ ತರಲು ಮುಂದಾಗಿದೆ. ಆ ಮೂಲಕ ಐಟಿ ಕ್ಷೇತ್ರದ ಉದ್ಯೋಗಿಗಳ ಕೆಲಸದ ಅವಧಿ ದಿನಕ್ಕೆ 12 ತಾಸಿಗೂ ಹೆಚ್ಚಿಗೆ ವಿಸ್ತರಣೆಯಾಗಲಿದೆ.
ಕಾರ್ಮಿಕ ಸಚಿವ ಸಂತೋಷ್ ಲಾಡ್ ಕಳೆದ ಶುಕ್ರವಾರ ಈ ಸಂಬಂಧ ವಿಕಾಸಸೌಧದಲ್ಲಿ ಸಭೆ ನಡೆಸಿದ್ದರು. ಸಭೆಯಲ್ಲಿ ಐಟಿ ಬಿಟಿ ಕ್ಷೇತ್ರದಲ್ಲಿ ದುಡಿಯುವ ನೌಕರರ ಕೆಲಸದ ಅವಧಿ ವಿಸ್ತರಣೆ ಬಗ್ಗೆ ಸಭೆ ಚರ್ಚಿಸಿದ್ದಾರೆ. ಸಭೆಯಲ್ಲಿ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಿಸಿನ್, ಐಟಿಬಿಟಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಏಕ್ ರೂಪ್ ಕೌರ್ ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
ಈ ಪ್ರಸ್ತಾಪಿತ ತಿದ್ದುಪಡಿಯಂತೆ ಐಟಿ, ಬಿಪಿಒ ಕ್ಷೇತ್ರಗಳಲ್ಲಿ ಕೆಲಸ ಮಾಡುವವರು ದಿನಕ್ಕೆ 12 ತಾಸಿಗೂ ಹೆಚ್ಚು ಅವಧಿ ಕೆಲಸ ಮಾಡಬೇಕಾಗುತ್ತದೆ. ಸತತ ಮೂರು ತಿಂಗಳಲ್ಲಿ 125 ತಾಸು ಮೀರದಂತೆ ಕೆಲಸ ಮಾಡುವ ತಿದ್ದುಪಡಿ ಇದಾಗಿದೆ. ಪ್ರಸಕ್ತ ಕಾಯ್ದೆಯಂತೆ ದಿನಕ್ಕೆ ಗರಿಷ್ಠ 10 ತಾಸು ಕೆಲಸ ಮಾಡಬಹುದಾಗಿದೆ. ಇದರಲ್ಲಿ ಒಟಿಯೂ (Over Time) ಒಳಗೊಂಡಿದೆ.
ಕರ್ನಾಟಕದ ಐಟಿ ಸಂಸ್ಥೆಗಳು ಕೆಲಸದ ಅವಧಿಯನ್ನು ವಿಸ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದವು. ಐಟಿ ಕಂಪನಿಗಳು ಪ್ರಸಕ್ತ ದಿನಕ್ಕೆ 9 ತಾಸು ಕೆಲಸದ ಅವಧಿಯನ್ನು ದಿನಕ್ಕೆ 12 ತಾಸು ಜೊತೆಗೆ, 2 ತಾಸು ಒಟಿ ಸೇರಿ 14 ತಾಸಿನವರೆಗೆ ಅವಧಿ ವಿಸ್ತರಿಸಲು ಮನವಿ ಮಾಡಿವೆ. ಈ ಸಂಬಂಧ ಪ್ರಸಕ್ತ ಕಾಯ್ದೆಗೆ ತಿದ್ದುಪಡಿ ತರುವಂತೆ ಮನವಿ ಸಲ್ಲಿಸಲಾಗಿದೆ. ಈ ನಿಟ್ಟಿನಲ್ಲಿ ತಿದ್ದುಪಡಿ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಐಟಿ ನೌಕರರ ಒಕ್ಕೂಟ, ಕಾರ್ಮಿಕ ಸಂಘಟನೆಗಳ ತೀವ್ರ ವಿರೋಧ: ಕೆಲಸದ ಅವಧಿ ವಿಸ್ತರಿಸುವ ರಾಜ್ಯ ಸರ್ಕಾರದ ಚಿಂತನೆಗೆ ಕರ್ನಾಟಕ ರಾಜ್ಯ ಐಟಿ ನೌಕರರ ಒಕ್ಕೂಟ (ಕೆಐಟಿಯು) ಹಾಗೂ ಕಾರ್ಮಿಕ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಶುಕ್ರವಾರ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಸಂಘಟನೆ ಪ್ರತಿನಿಧಿಗಳು ಈ ತಿದ್ದುಪಡಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಮೊಹಮ್ಮದ್ ಮೊಹಿಸಿನ್, ಐಟಿ ಬಿಟಿ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಏಕ್ ರೂಪ್ ಕೌರ್ ಭೇಟಿಯಾಗಿ ಕೆಲಸದ ಅವಧಿ ವಿಸ್ತರಿಸದಂತೆ ಒತ್ತಾಯಿಸಿದ್ದಾರೆ. ಕೆಲಸದ ಅವಧಿ ವಿಸ್ತರಿಸಿದರೆ ಮಾನಸಿಕ ಒತ್ತಡ, ಆರೋಗ್ಯದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲಸದ ಅವಧಿಯನ್ನು ವಿಸ್ತರಿಸುವ ಮೂಲಕ ಪ್ರಸಕ್ತ ಇರುವ ಮೂರು ಶಿಫ್ಟ್, ಎರಡು ಶಿಫ್ಟ್ಗೆ ಕಡಿತವಾಗುವ ಸಾಧ್ಯತೆ ಇದೆ. ಅದರಿಂದ 1/3 ಸಿಬ್ಬಂದಿ ವರ್ಗ ಕೆಲಸ ಕಳೆದುಕೊಳ್ಳುವ ಆತಂಕ ಇದೆ ಎಂದು ಕಾರ್ಮಿಕ ಒಕ್ಕೂಟ ಸಭೆಯಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: 'ನನ್ನ ಆಧಾರ್ ಕಾರ್ಡ್ನೊಂದಿಗೆ ನನ್ನ ಆಸ್ತಿ ಸುಭದ್ರ' - ಏನಿದು ಯೋಜನೆ?, ಪ್ರಯೋಜನಗಳೇನು? - Aadhar Link To RTC