ಕಾರವಾರ: ಕಾಳಿ ನದಿಯ ಹಳೆಯ ಸೇತುವೆ ಕುಸಿತದಿಂದಾಗಿ ನದಿಯಲ್ಲಿ ಬಿದ್ದಿದ್ದ ಲಾರಿಯನ್ನು ಮೇಲೆತ್ತುವ ಕಾರ್ಯಾಚರಣೆಯನ್ನು ಬುಧವಾರ ಆರಂಭಿಸಿದರೂ ಸಾಧ್ಯವಾಗಲಿಲ್ಲ. ನದಿಯಲ್ಲಿ ಸೇತುವೆಯ ಸ್ಲ್ಯಾಬ್ ಮೇಲೆ ನಿಂತಿರುವ ಲಾರಿಗೆ ಬ್ರಿಡ್ಜ್ನ ಕಬ್ಬಿಣದ ಸರಳುಗಳು ಸುತ್ತಿಕೊಂಡಿರುವ ಕಾರಣ ಮೇಲೆತ್ತುವ ಮೊದಲ ಪ್ರಯತ್ನ ವಿಫಲವಾಗಿದೆ.
ಕಳೆದ ಆಗಸ್ಟ್ 6ರಂದು ತಡರಾತ್ರಿ ಸೇತುವೆ ಕುಸಿತಗೊಂಡು ತಮಿಳುನಾಡು ಮೂಲದ 16 ಚಕ್ರದ ಲಾರಿ ಕಾಳಿ ನದಿಗೆ ಬಿದ್ದಿತ್ತು. ಲಾರಿ ಸಂಪೂರ್ಣ ನದಿಯಾಳಕ್ಕೆ ಬೀಳದೇ ಸೇತುವೆಯ ಸ್ಲ್ಯಾಬ್ ಮೇಲೆಯೇ ನಿಂತಿದ್ದು, ಮೇಲೆತ್ತಲು ಸಹಾಯವಾಗುವಂತಿದೆ. ಆದರೆ, ಕುಸಿತಗೊಂಡ ಸೇತುವೆಯ ಇನ್ನುಳಿದ ಅವಶೇಷಗಳ ಕಬ್ಬಿಣದ ಬಾರ್ ರೋಪ್‌ಗಳು ಲಾರಿಯ ಸುತ್ತ ಸುತ್ತಿಕೊಂಡಿವೆ. ಸ್ಲ್ಯಾಬ್ ಮೇಲೆ ಲಾರಿ ನಿಂತಿದ್ದು, ದಡಕ್ಕೆ ಎಳೆಯುವ ವೇಳೆ ರಭಸಕ್ಕೆ ರೋಪ್ ಕಟ್ ಆಗಿ ನದಿಯಾಳಕ್ಕೆ ಹೋದಲ್ಲಿ ಮತ್ತೆ ಮೇಲೆತ್ತುವುದು ಕಠಿಣವಾಗಲಿದೆ. ಈ ಕಾರಣದಿಂದ ಬುಧವಾರ ಐಆರ್‌ಬಿ ಹಾಗೂ ಯಮುನಾ ಕ್ರೇನ್ ಸರ್ವಿಸಸ್ ತಂಡವು ಮೂರು ಕ್ರೇನ್ಗಳನ್ನು ಬಳಸಿ ಲಾರಿ ಮೇಲೆತ್ತುವ ಕಾರ್ಯಾಚರಣೆಗೆ ಪ್ರಯತ್ನಿಸಿ, ಬಳಿಕ ಕೈಬಿಟ್ಟಿದೆ.
ಕ್ರೇನ್ ರೋಪ್ ಸಾಮರ್ಥ್ಯ ಸಾಲುತ್ತಿಲ್ಲ: ಸುಮಾರು 18 ಟನ್ ಸಾಮರ್ಥ್ಯ ಹೊಂದಿರುವ ಲಾರಿ ದಡಕ್ಕೆ ಎಳೆಯಲು ಕ್ರೇನ್ ರೋಪ್‌ಗಳು ಸಾಲುತ್ತಿಲ್ಲ. ಅಲ್ಲದೆ, ಈ ಸಂದರ್ಭದಲ್ಲಿ ಲಾರಿಗೆ ಸುತ್ತುವರೆದಿರುವ ಸೇತುವೆ ಸರಳುಗಳು ಕುಸಿತವಾಗಿರುವ ಸೇತುವೆಯ ಇನ್ನುಳಿದ ಅವಶೇಷಗಳಿಗೆ ಸಂಪರ್ಕ ಹೊಂದಿವೆ. ಒಂದೊಮ್ಮೆ ಲಾರಿ ಎಳೆದರೆ, ಅದರ ಜೊತೆಗೆ ಇನ್ನುಳಿದ ಸೇತುವೆಯ ಅವಶೇಷಗಳೂ ಬರುತ್ತವೆ. ಅವುಗಳನ್ನೂ ಎಳೆದು ತರುವ ಸಾಧ್ಯತೆ ಇದೆ. ಅಲ್ಲದೇ ಸೇತುವೆಯೂ ಇನ್ನಷ್ಟು ಕುಸಿಯುವ ಭೀತಿ ಕೂಡ ಇದೆ. ಹೀಗಾಗಿ, ಲಾರಿ ಸುರಕ್ಷಿತವಾಗಿ ಮೇಲೆತ್ತಿ ದಡಕ್ಕೆ ಎಳೆಯುವುದು ಸವಾಲಾಗಿ ಪರಿಣಮಿಸಿದೆ. ದಡದ ಎರಡು ಬದಿಯಿಂದಲೂ ನದಿಯ ಮಧ್ಯದಲ್ಲಿ ಲಾರಿ ಸಿಲುಕಿಕೊಂಡಿರುವುದು ಕಾರ್ಯಾಚರಣೆಗೆ ಇನ್ನಷ್ಟು ತೊಡಕಾಗಿ ಪರಿಣಮಿಸಿದೆ ಎಂದು ಕ್ರೇನ್ ಆಪರೇಟರ್ಗಳು ಹೇಳಿದ್ದಾರೆ.
ಮಂಗಳೂರಿನಿಂದ ಬರಲಿದೆ ಹೆಚ್ಚಿನ ಸಾಮರ್ಥ್ಯದ ಕ್ರೇನ್: ಜೊತೆಗೆ, ನೀರಿನ ಸೆಳೆತ ಹೆಚ್ಚಾಗಿದ್ದು, ರೋಪ್‌ಗಳು ಕ್ರೇನ್ ನಿಯಂತ್ರಣಕ್ಕೆ ಸಿಗುತ್ತಿರಲಿಲ್ಲ. ಅಲ್ಲದೆ, ರೋಪ್ ಸಾಮರ್ಥ್ಯವೂ ಸಾಲುತ್ತಿರಲಿಲ್ಲ. ರೋಪ್ ತುಂಡಾಗಿ ಲಾರಿ ನದಿಯಾಳಕ್ಕೆ ಹೋದರೆ ಇನ್ನೂ ಸಮಸ್ಯೆ ಆಗಬಹುದೆಂಬ ಕಾರಣಕ್ಕೆ ಕಾರ್ಯಾಚರಣೆ ನಿಲ್ಲಿಸಲಾಗಿದೆ. ಗುರುವಾರದಂದು ಮಂಗಳೂರಿನಿಂದ ದೊಡ್ಡ ಕ್ರೇನ್ ಬರಲಿದ್ದು, ಬಳಿಕ ಕಾರ್ಯಾಚರಣೆ ಮುಂದುವರೆಯಲಿದೆ ಎಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಲಾರಿ ಮಾಲೀಕ ಆತ್ಮಹತ್ಯೆ ಯತ್ನ: ನದಿಗೆ ಬಿದ್ದಿದ್ದ ಲಾರಿಯನ್ನು ಎತ್ತಲು ಜಿಲ್ಲಾಡಳಿತ ಹಿಂದೇಟು ಹಾಕುತ್ತಿದೆ ಎಂದು ಆರೋಪಿಸಿ ಮಂಗಳವಾರ ತಡರಾತ್ರಿ ಲಾರಿ ಮಾಲೀಕ ಸೆಂಥಿಲ ಕುಮಾರ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಆದರೆ ಪೊಲೀಸರು ಅವರನ್ನು ತಡೆದಿದ್ದರು. ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದ ಲಾರಿ ಮಾಲೀಕ, ಆ.7ರಂದು ಸೇತುವೆ ಕುಸಿದಾಗ ಲಾರಿ ಕೂಡ ನದಿಗೆ ಬಿದ್ದಿದೆ. ಆದರೆ 7 ದಿನವಾದರೂ ಲಾರಿಯನ್ನು ಮೇಲೆತ್ತಿಲ್ಲ. ನನ್ನ ಲಾರಿ ಬಿದ್ದ ಕಾರಣದಿಂದಲೇ ನಾಲ್ಕಾರು ಲಾರಿಗಳು ಅಪಾಯದಿಂದ ಪಾರಾಗಿವೆ. ಆದರೂ ತಮಿಳುನಾಡಿನ ಲಾರಿ ಎಂದು ಮೇಲೆತ್ತಲು ನಿಷ್ಕಾಳಜಿ ಮಾಡಲಾಗಿದೆ ಎಂದು ಆರೋಪಿಸಿದ್ದರು.
ಇದನ್ನೂ ಓದಿ: ನದಿಗೆ ಬಿದ್ದ ಲಾರಿ ಎತ್ತಲು ಹಿಂದೇಟು: ಲಾರಿ ಮಾಲೀಕನ ಆರೋಪ - LORRY DRIVER SUICIDE ATTEMPT