ಮಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಯೋಜನೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ಪ್ರಯತ್ನ ಮಾಡಲಾಗುವುದು. ಯಾರಿಗೆ ಅಗತ್ಯವಿದೆಯೋ, ಯಾರು ಅರ್ಹರಿದ್ದಾರೋ ಅವರಿಗೆ ಸಿಗಬೇಕು ಎಂದು ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
"ನ್ಯೂನತೆಗಳನ್ನು ಸರಿಪಡಿಸುತ್ತೇವೆ": ಮಂಗಳೂರಿನಲ್ಲಿಂದು ಮಾತನಾಡಿದ ಅವರು, ಯೋಜನೆಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸಲಾಗುವುದು. ಇದು ಹೊಸ ಯೋಜನೆ. ಹಾಗಾಗಿ, ಹೊಸ ಯೋಜನೆ ಅನುಷ್ಠಾನ ಮಾಡುವಾಗ ಅದರಲ್ಲಿರುವ ನ್ಯೂನತೆಗಳನ್ನು ಸರಿಪಡಿಸಿ ಮುಂದುವರಿಸುತ್ತೇವೆ ಎಂದರು.
ಅಗತ್ಯ ಇಲ್ಲದವರಿಗೆ ಯೋಜನೆ ತಲುಪುತ್ತಿರುವುದು ಸರ್ಕಾರಕ್ಕೆ ಹೊರೆ. ಇದು ಯೋಜನೆಯ ಉದ್ದೇಶವೂ ಅಲ್ಲ. ಬಡವರಿಗೆ ಯೋಜನೆಯ ಪ್ರಯೋಜನವಾಗಬೇಕು ಎಂದು ತಿಳಿಸಿದರು.
ಬಿಪಿಎಲ್ ಕಾರ್ಡ್ ಅನ್ನು ಮಾನದಂಡವಾಗಿ ಉಪಯೋಗಿಸುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳು ಅನರ್ಹರಿಗೆ ಹೋಗುತ್ತಿದೆ. ಅದಕ್ಕೆ ಮಾನದಂಡಗಳ ಬಗ್ಗೆ ಮುಂದೆ ಚರ್ಚಿಸುತ್ತೇವೆ. ಶಕ್ತಿ ಯೋಜನೆಯಲ್ಲಿ ಯಾವುದೇ ಮಾನದಂಡವಿಲ್ಲ. ಗೃಹ ಲಕ್ಷ್ಮಿ ಯೋಜನೆ ಬಡ ಕುಟುಂಬಕ್ಕೆ ಹೋಗಬೇಕು. ಶ್ರೀಮಂತರಿಗೆ ಕೊಟ್ಟು ಪ್ರಯೋಜನವಿಲ್ಲ ಎಂದರು.
ಅಂಗಾಂಗ ದಾನಿಗಳಿಗೆ ಪ್ರೋತ್ಸಾಹ: ಅಂಗಾಂಗ ದಾನಿಗಳಿಗೆ ಪ್ರೋತ್ಸಾಹ ನೀಡಲು ಇಂದು ರಾಜ್ಯದೆಲ್ಲೆಡೆ ಅಂಗಾಂಗ ದಾನಿಗಳನ್ನು ಸನ್ಮಾನಿಸುವ ಕಾರ್ಯ ಮಾಡಿದ್ದೇವೆ. ಅಂಗಾಂಗ ದಾನಕ್ಕೆ ಹೆಚ್ಚು ಪ್ರೋತ್ಸಾಹ ಕೊಡಬೇಕು. ಅಂಗಾಂಗಗಳಿಗೆ ಬೇಡಿಕೆ ತುಂಬಾ ಇದೆ. ಆದರೆ, ಸಿಗುವುದು ತುಂಬಾ ಕಡಿಮೆ. ಸರತಿಯಲ್ಲಿ ಜನ ಕಾಯುತ್ತಿದ್ದಾರೆ. ಸಿಗದೇ ಇರುವುದರಿಂದ ಜೀವ ಉಳಿಸಲು ಕಷ್ಟವಾಗಿದೆ. ಅಂಗಾಂಗ ದಾನದಿಂದ 8 ಜನರಿಗೆ ಜೀವದಾನ ಸಿಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ: ಗ್ಯಾರಂಟಿಗಳಿಂದ ರಾಜ್ಯ ದಿವಾಳಿ ಎಂದವರಿಗೆ ಆರ್ಥಿಕ ಬೆಳವಣಿಗೆಯಿಂದಲೇ ಉತ್ತರ: ಸಿಎಂ ಸಿದ್ದರಾಮಯ್ಯ - Independence Day