ಬೆಂಗಳೂರು: ದೇಶದಲ್ಲಿ ಲಕ್ಷಕೂ ಅಧಿಕ ಸ್ಟಾರ್ಟ್ ಅಪ್ಗಳಿವೆ. ಆದರೆ ಕೇವಲ 200 ಕಂಪನಿಗಳು ಮಾತ್ರ ರಕ್ಷಣಾ ವಲಯದಲ್ಲಿ ಕೆಲಸ ಮಾಡುತ್ತಿವೆ. ಕೇಂದ್ರ ಸರ್ಕಾರ ಮತ್ತು ಯುವ ಉದ್ಯಮಿಗಳು ರಕ್ಷಣಾ ವಲಯದಲ್ಲಿ ಬಳಸಲಾಗುವ ಸಾಧನಗಳ ಸಂಶೋಧನೆ ಮತ್ತು ಉತ್ಪಾದನೆಯ ಕಡೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದೆ ಎಂದು ಭಾರತೀಯ ಸೇನೆಯ ದಕ್ಷಿಣ ಕಮಾಂಡ್ನ ಲೆಫ್ಟಿನೆಂಟ್ ಜನರಲ್ ಕೆ.ಎಸ್.ಬ್ರಾರ್ ಹೇಳಿದರು.
ವಿವೇಕನಗರದ ಭಾರತೀಯ ಸೇನೆಯ ಎ.ಎಸ್.ಸಿ ಸೆಂಟರ್ ಮತ್ತು ಕಾಲೇಜಿನ ಚೋಪ್ರಾ ಆಡಿಟೋರಿಯಂನಲ್ಲಿ ಬುಧವಾರ, ಮೂರು ದಿನಗಳ ಸದರ್ನ್ ಸ್ಟಾರ್ ಆರ್ಮಿ ಅಕಾಡೆಮಿಯ ಇಂಡಸ್ಟ್ರಿ ಇಂಟರ್ಫೇಸ್ ಸಮ್ಮಿಟ್ ಉದ್ಘಾಟಿಸಿ ಅವರು ಮಾತನಾಡಿದರು.
![ಆರ್ಮಿ ಸಮ್ಮಿಟ್](https://etvbharatimages.akamaized.net/etvbharat/prod-images/09-05-2024/kn-bng-02-interface-summit-asc-center-7210969_08052024195055_0805f_1715178055_928.jpg)
ದೇಶದಲ್ಲಿ ಒಂದು ಲಕ್ಷ ಮೂವತ್ತೈದು ಸಾವಿರದ ಮುನ್ನೂರ ಐವತ್ತೆರಡು ಸ್ಟಾರ್ಟ್ ಅಪ್ಗಳು ಮತ್ತು 111 ಯುನಿಕಾರ್ನ್ಗಳಿವೆ. ಆದರೆ ಕೇವಲ 200 ಕಂಪನಿಗಳು ರಕ್ಷಣಾ ವಲಯದಲ್ಲಿ ಸಂಶೋಧನೆ, ಉತ್ಪಾದನೆಯಲ್ಲಿ ತೊಡಗಿವೆ. ಮುಂದುವರೆದ ರಾಷ್ಟ್ರಗಳ ರೀತಿಯಲ್ಲಿ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸುವ ಕೆಲಸ ಶೀಘ್ರದಲ್ಲೇ ಆಗಬೇಕಿದೆ. ಸ್ಟಾರ್ಟ್ ಅಪ್ಗಳು ಸಾಕಷ್ಟು ಹೊಸ ವಿಚಾರಗಳು ಮತ್ತು ಆಲೋಚನೆಗಳೊಂದಿಗೆ ತಮ್ಮ ಕಾರ್ಯಾರಂಭಿಸುತ್ತವೆ. ಆದ್ದರಿಂದ ಅವುಗಳನ್ನು ಪ್ರೋತ್ಸಾಹಿಸುವುದು ಅಗತ್ಯ. ರಷ್ಯಾ, ದಕ್ಷಿಣ ಕೊರಿಯಾ, ಜರ್ಮನಿ, ಫ್ರಾನ್ಸ್, ಇಂಗ್ಲೆಂಡ್ ದೇಶಗಳು ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಮುಂದುವರೆದ ರಾಷ್ಟ್ರಗಳ ಪಟ್ಟಿಗೆ ಸೇರಿವೆ. ಆದ್ದರಿಂದ ನಾವೂ ಕೂಡ ವಿಶ್ವದ ಮುಂಚೂಣಿ ನಾಯಕತ್ವ ವಹಿಸಬೇಕಾದರೆ ರಕ್ಷಣಾ ಉತ್ಪಾದನೆಯನ್ನು ಹೆಚ್ಚಿಸಿಕೊಂಡು ಮುನ್ನಡೆಯಬೇಕಿದೆ ಎಂದು ಹೇಳಿದರು.
ಸೇನೆಯ ಸದರ್ನ್ ಕಮಾಂಡ್ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಲೆಫ್ಟಿನೆಂಟ್ ಜನರಲ್ ಎ.ಕೆ.ಸಿಂಗ್ ಮಾತನಾಡಿ, ರಕ್ಷಣಾ ಉತ್ಪಾದನೆಗೆ ಪರಿಸರ ವ್ಯವಸ್ಥೆ ಪ್ರಸ್ತುತಪಡಿಸಿದ ಅಗಾಧ ಅವಕಾಶಗಳನ್ನು ಎತ್ತಿ ತೋರಿಸಿದೆ ಎಂದು ತಿಳಿಸಿದರು. ನ್ಯಾಷನಲ್ ಸೆಕ್ಯೂರಿಟಿ ಬೋರ್ಡ್ ಅಧ್ಯಕ್ಷ ಪಿ.ಎಸ್.ರಾಘವನ್ ಸೇರಿದಂತೆ ಹಲವು ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
![ಆರ್ಮಿ ಸಮ್ಮಿಟ್](https://etvbharatimages.akamaized.net/etvbharat/prod-images/09-05-2024/kn-bng-02-interface-summit-asc-center-7210969_08052024195055_0805f_1715178055_531.jpg)
100ಕ್ಕೂ ಹೆಚ್ಚು ಉತ್ಪನ್ನಗಳ ಪ್ರದರ್ಶನ: 100ಕ್ಕೂ ಹೆಚ್ಚು ಉದ್ಯಮಗಳು ಸಮ್ಮಿಟ್ನಲ್ಲಿ ತಮ್ಮ ಉತ್ಪನ್ನಗಳನ್ನು ಪ್ರದರ್ಶಿಸಿದರು. ರಾಮಯ್ಯ ವಿಶ್ವವಿದ್ಯಾಲಯ ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದಂತಹ ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.