ಬೆಳಗಾವಿ: ಬೆಳಗಾವಿಯ ಕೃಷಿ ಉತ್ಪನ್ನ ಮಾರುಕಟ್ಟೆಗೆ ಈರುಳ್ಳಿ ಆವಕದಲ್ಲಿ ಹೆಚ್ಚಳವಾಗಿದ್ದು, ಒಳ್ಳೆಯ ದರ ಕೂಡ ಸಿಗುತ್ತಿದೆ. ಹಾಗಾಗಿ, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಹೌದು, ಈ ಬಾರಿ ಉತ್ತಮ ಮಳೆಯಿಂದ ಈರುಳ್ಳಿ ಬೆಳೆದಿದ್ದ ರೈತರು ಅಧಿಕ ಇಳುವರಿ ಪಡೆಯುತ್ತಿದ್ದಾರೆ. ಬೆಳಗಾವಿ ಎಪಿಎಂಸಿಗೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಜಿಲ್ಲೆಯ ಸವದತ್ತಿ, ಅಥಣಿ ಸೇರಿ ವಿವಿಧೆಡೆಯಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರಾಟಕ್ಕಾಗಿ ಎಪಿಎಂಸಿಯತ್ತ ಧಾವಿಸಿ ಬರುತ್ತಿದ್ದಾರೆ. ಕಳೆದ ಶನಿವಾರ ಸುಮಾರು 20 ಸಾವಿರ ಕ್ವಿಂಟಾಲ್ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. ಈರುಳ್ಳಿ ಗುಣಮಟ್ಟ ಆಧರಿಸಿ ಕ್ವಿಂಟಾಲ್ ಗೆ 3 ರಿಂದ 5 ಸಾವಿರ ರೂ. ವರೆಗೆ ದರ ಸಿಗುತ್ತಿದೆ. ಒಳ್ಳೆಯ ದರಕ್ಕೆ ಈರುಳ್ಳಿ ಮಾರಾಟವಾಗಿದ್ದರಿಂದ ರೈತರು ಸಂತಸಗೊಂಡಿದ್ದಾರೆ.
ಉತ್ತಮ ಬೆಲೆ ಬಂದ ಹಿನ್ನೆಲೆಯಲ್ಲಿ ಮಾತನಾಡಿರುವ ರೈತ ಅರುಣ ಮಲಗಾಣ, "ನನಗೆ ಕ್ವಿಂಟಾಲ್ಗೆ ಐದು ಸಾವಿರ ಬೆಲೆ ಸಿಕ್ಕಿದೆ. ಈರುಳ್ಳಿ ಮಾರಾಟಕ್ಕೆ ತಂದಿರುವ ಬಹುತೇಕ ಎಲ್ಲ ರೈತರು ಒಳ್ಳೆಯ ಬೆಲೆ ಪಡೆದ್ದರಿಂದ ಸಂತಸದಲ್ಲಿದ್ದಾರೆ. ನಾವು 6 ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದು, 600 ಕ್ವಿಂಟಾಲ್ ಇಳುವರಿ ಬಂದಿದೆ. ಎಕರೆಗೆ ಕನಿಷ್ಟ ಖರ್ಚು ಕಳೆದು 3 ಲಕ್ಷ ಆದಾಯ ಬಂದಿದೆ. ಬೇಸಿಗೆಯಲ್ಲಿ ಬೆಳೆದಿದ್ದ ಈರುಳ್ಳಿ ಮನೆಯಲ್ಲಿ ಸಂಗ್ರಹಿಸಿ ಇಟ್ಟು ಇಂದು ಮಾರುಕಟ್ಟೆಗೆ ತಂದಿದ್ದೇವೆ" ಎಂದು ಸಂತಸ ಹಂಚಿಕೊಂಡಿದ್ದಾರೆ.
ಎಪಿಎಂಪಿ ಕಾರ್ಯದರ್ಶಿ ಈ ಬಗ್ಗೆ ಹೇಳಿದ್ದಿಷ್ಟು: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಕೆ.ಎಚ್. ಗುರುಪ್ರಸಾದ ಅವರನ್ನು ಸಂಪರ್ಕಿಸಿದಾಗ 'ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಪ್ರತಿ ಶನಿವಾರ ಮತ್ತು ಬುಧವಾರ ಈರುಳ್ಳಿ ಮಾರುಕಟ್ಟೆ ಇರುತ್ತದೆ. ಸದ್ಯ ಕ್ವಿಂಟಾಲ್ ಗೆ 3000-4,500 ರೂ. ಬೆಲೆ ಸಿಗುತ್ತಿದೆ. ಈ ದರ ಮುಂದುವರಿಯಲಿದೆ. ಇಲ್ಲಿಗೆ ಬಂದ ಈರುಳ್ಳಿ ಗೋವಾ, ಮುಂಬೈ, ಪಶ್ಚಿಮ ಬಂಗಾಳ, ಅಸ್ಸಾಂ ಅಷ್ಟೇ ಅಲ್ಲದೇ ಬಾಂಗ್ಲಾ ದೇಶಕ್ಕೂ ರವಾನಿಸಲಾಗುತ್ತದೆ. ಬಹಳಷ್ಟು ರೈತರು ಒಂದೇ ಮಾರುಕಟ್ಟೆಗೆ ಈರುಳ್ಳಿ ತಂದರೆ ದರದಲ್ಲಿ ಏರುಪೇರಾಗುವ ಸಾಧ್ಯತೆಯಿದೆ' ಎಂದು ಅವರು ಮಾಹಿತಿ ನೀಡಿದರು.
ಬೇಸಿಗೆ ಸಂದರ್ಭದಲ್ಲಿ ಬೆಳೆದು, ಬೆಲೆ ಇಲ್ಲದ್ದಕ್ಕೆ ದಾಸ್ತಾನು ಮಾಡಿದ್ದ ರೈತರು, ಉತ್ತಮ ಬೆಲೆ ಬಂದಿರುವ ಹಿನ್ನೆಲೆಯಲ್ಲಿ ಮಾರುಕಟ್ಟೆಗೆ ಇರುಳ್ಳಿಯನ್ನು ತರುತ್ತಿದ್ದಾರೆ. ಆದರೆ, ಮುಂಗಾರಿನಲ್ಲಿ ರೈತರು ಬೆಳೆದಿದ್ದ ಈರುಳ್ಳಿ ಅತೀ ಮಳೆಯಿಂದ ಹಾನಿಯಾದ್ದರಿಂದ ನಿರೀಕ್ಷೆಯಷ್ಟು ಈರುಳ್ಳಿ ಕೈಗೆ ಬಂದಿರಲಿಲ್ಲ. ಹಾಗಾಗಿ ಒಳ್ಳೆಯ ದರವಿದ್ದರೂ ಕೂಡ ರೈತರ ಬಳಿ ಈರುಳ್ಳಿ ಇಲ್ಲದಿರುವುದು ರೈತರಿಗೆ ತುಸು ನಿರಾಸೆ ತಂದಿರುವುದು ಅಷ್ಟೇ ಸತ್ಯ.
ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಶಾಲೆಗಳಿಗೆ ದಸರಾ ರಜೆ ಘೋಷಣೆ; 17 ದಿನ ಮಕ್ಕಳಿಗೆ ಹಾಲಿಡೇಸ್ - Dasara holiday announced