ಬೆಳಗಾವಿ: ಈರುಳ್ಳಿ ದರ ನಿಗದಿಯಲ್ಲಿ ದಲ್ಲಾಳಿಗಳಿಂದ ಮೋಸ ಆಗುತ್ತಿದೆ ಎಂದು ಆರೋಪಿಸಿ ಬೆಳಗಾವಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಬಂದ್ ಮಾಡಿ ಈರುಳ್ಳಿ ಬೆಳೆಗಾರರು ದಿಢೀರ್ ಪ್ರತಿಭಟನೆ ನಡೆಸಿದರು.
ರೈತರಿಗೆ ದಲ್ಲಾಳಿಗಳು ದರದಲ್ಲಿ ನಿರಂತರವಾಗಿ ಮೋಸ ಮಾಡುತ್ತಿದ್ದಾರೆ. ಡ್ಯಾಮೇಜ್ ಆಗಿರುವ ಬೆಲೆಗಳಿಗೂ ಗುಣಮಟ್ಟದ ಈರುಳ್ಳಿಗೆ ದಲ್ಲಾಳಿಗಳು ಒಂದೇ ದರ ನೀಡುತ್ತಿದ್ದಾರೆ. ದಲ್ಲಾಳಿಗಳ ಮೋಸದಾಟಕ್ಕೆ ಈರುಳ್ಳಿ ಬೆಳೆದ ನಮಗೆ ಅನ್ಯಾಯ ಆಗುತ್ತಿದೆ. ರೈತರಿಗೆ ನ್ಯಾಯಯುತ ದರವನ್ನು ನೀಡಬೇಕೆಂದು ಆಗ್ರಹಿಸಿದರು.
ಎಪಿಎಂಸಿ ಗೇಟ್ ಬಂದ್ ಮಾಡಿ ರೈತರು ಪ್ರತಿಭಟನೆ ಮಾಡಿದ ಹಿನ್ನೆಲೆಯಲ್ಲಿ ಗೇಟ್ ಹೊರಗಡೆಯೇ ನೂರಾರು ಲಾರಿಗಳು ನಿಂತಿದ್ದವು. ದಿಢೀರ್ ಎಚ್ಚೆತ್ತುಕೊಂಡ ಎಪಿಎಂಸಿ ಅಧಿಕಾರಿಗಳು ಕೂಡಲೇ ರೈತರ ಜೊತೆ ಸಭೆ ನಡೆಸಿ, ಸಮಾಧಾನ ಪಡಿಸಲು ಯತ್ನಿಸಿದರು.
ಮುಧೋಳ ತಾಲ್ಲೂಕಿನ ರೈತ ಜಾವೇದ್ ಡೆಂಗೆ ಮಾಧ್ಯಮಗಳ ಜೊತೆಗೆ ಮಾತನಾಡಿ, ಕಳೆದ ವಾರಕ್ಕಿಂತ 2-3 ಸಾವಿರ ದರ ವ್ಯತ್ಯಾಸವಾಗಿದೆ. ಹಿಂದಿನ ವಾರ 1 ಕ್ವಿಂಟಾಲ್ ಈರುಳ್ಳಿ 5 ಸಾವಿರ ರೂಪಾಯಿಗೆ ಮಾರಾಟವಾಗಿದ್ದರೆ, ಈ ವಾರ 2500-1500ರೂ. ದರವಿದೆ. 1 ಚೀಲ ಈರುಳ್ಳಿ ಬೆಳೆಯಲು 1600 ರೂ. ಖರ್ಚು ಬರುತ್ತದೆ. ಆದರೆ, ಈಗ ನಮಗೆ ಸಿಗುತ್ತಿರುವುದು ಕೇವಲ 1000-1200 ರೂ. ಮಾತ್ರ. ಇದರಿಂದ 400 ರೂ. ನಮಗೆ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಇದನ್ನೂ ಓದಿ: ಆದಿ ಉಡುಪಿ ಎಪಿಎಂಸಿಯಲ್ಲಿ ಚೀನಾ ಬೆಳ್ಳುಳ್ಳಿ ಮಾರಾಟ ಆರೋಪ; 12 ಟನ್ ಬೆಳ್ಳುಳ್ಳಿ ವಶಕ್ಕೆ - Official Raid Adi Udupi APMC