ಬೆಂಗಳೂರು: ಕಾಂಗ್ರೆಸ್ ಸರ್ಕಾರಕ್ಕೆ ಒಂದು ವರ್ಷ ತುಂಬಿದ ಸಂದರ್ಭದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸಿಎಂ ನಿವಾಸ ಕಾವೇರಿಗೆ ಸೋಮವಾರ ಸಂಜೆ ತೆರಳಿ ಸಿದ್ದರಾಮಯ್ಯ ಅವರಿಗೆ ಶುಭಾಶಯ ತಿಳಿಸಿದರು. ರಾಜ್ಯ ಸರ್ಕಾರ ಒಂದು ವರ್ಷವನ್ನು ಯಶಸ್ವಿಯಾಗಿ ಪೂರೈಸಿ ಎರಡನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.
ಪ್ರಚಂಡ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಇದೀಗ ಒಂದು ವರ್ಷವನ್ನು ಪೂರೈಸಿದೆ. ಪಂಚ ಗ್ಯಾರಂಟಿ ಅನುಷ್ಠಾನ ಮಾಡುವ ಮೂಲಕ ಕರ್ನಾಟಕ ಮಾದರಿ ಆಡಳಿತದ ಪರಿಕಲ್ಪನೆಯೊಂದಿಗೆ ಅಧಿಕಾರ ನಡೆಸುತ್ತಿದೆ. ಒಂದು ವರ್ಷದ ಆಡಳಿತ ನನಗೆ ತೃಪ್ತಿ ತಂದಿದೆ. ನಮ್ಮ ಪಕ್ಷಕ್ಕೂ ತೃಪ್ತಿ ತಂದಿದೆ. ಹೈ ಕಮಾಂಡ್ಗೂ ತೃಪ್ತಿ ತಂದಿದೆ. ನುಡಿದಂತೆ ನಾವು ನಡೆದಿದ್ದೇವೆ. ಎರಡನೇ ವರ್ಷಕ್ಕೆ ನಾವು ಹುರುಪಿನಿಂದ ಕಾಲಿಡುತ್ತಿದ್ದೇವೆ ಎಂದು ಸಿಎಂ ಇಂದು ಸಂತಸ ಹಂಚಿಕೊಂಡಿದ್ದಾರೆ.
ಪಂಚ ಗ್ಯಾರಂಟಿ ಜೊತೆ ಅಭಿವೃದ್ಧಿ ಕೆಲಸವನ್ನೂ ನಿಲ್ಲಿಸಿಲ್ಲ. ಲೋಕಸಭೆ ಚುನಾವಣೆ ಬಳಿಕ ಗ್ಯಾರಂಟಿ ಯೋಜನೆ ನಿಲ್ಲಿಸುತ್ತಾರೆ ಎಂದು ಟೀಕಿಸಿದ್ದರು. ಈ ಗ್ಯಾರಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. 54,374 ಕೋಟಿ ರೂ. ಬಂಡವಾಳ ವೆಚ್ಚ ಮಾಡುತ್ತೇವೆ ಅಂದಿದ್ದೆವು. ನಾವು ಖರ್ಚು ಮಾಡಿದ್ದು 56,274 ಕೋಟಿ ರೂ. ಆಗಿದೆ. ಆ ಮೂಲಕ ಅಭಿವೃದ್ಧಿ ಕೆಲಸವನ್ನೂ ನಿಲ್ಲಿಸಿಲ್ಲ. ಯಾವ ಇಲಾಖೆಯಲ್ಲೂ ನಾವು ಅಭಿವೃದ್ಧಿ ಕೆಲಸ ಕಡಿಮೆ ಮಾಡಿಲ್ಲ ಎಂದು ಸಿಎಂ ಇಂದು ಸ್ಪಷ್ಟಪಡಿಸಿದ್ದಾರೆ.
"ಎಲ್ಲರ ಸಹಕಾರದಿಂದ ರಾಜ್ಯದ ಜನರಿಗೆ ತೃಪ್ತಿದಾಯಕ ಆಡಳಿತ ನೀಡಿದ್ದೇವೆ. ಗ್ಯಾರಂಟಿ ಯೋಜನೆಗಳ ಜೊತೆಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಸರ್ಕಾರ ನೀಡಿದೆ. ಜನರಿಗೆ ನಮ್ಮ ಸರ್ಕಾರದ ಬಗ್ಗೆ ತೃಪ್ತಿಯಿದೆ. ಜನರ ವಿಶ್ವಾಸವನ್ನು ಗಳಿಸಿ ಒಂದು ವರ್ಷ ಪೂರೈಸಿದ್ದೇವೆ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.