ಬೆಳಗಾವಿ: ಕೆಎಎಸ್ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ನೀಡಲು 15 ನಿಮಿಷ ತಡವಾದ ಹಿನ್ನೆಲೆಯಲ್ಲಿ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿ ನಗರದ ಅಂಜುಮನ್ ಪದವಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಮಂಗಳವಾರ ನಡೆದಿದೆ.
ಪ್ರಶ್ನೆ ಪತ್ರಿಕೆ ತಡವಾಗಿ ನೀಡಿದ್ದರಿಂದ ಪರೀಕ್ಷಾ ಕೇಂದ್ರದ ಸಿಬ್ಬಂದಿ ಜೊತೆಗೆ ಕೆಎಎಸ್ ಪರೀಕ್ಷಾರ್ಥಿಗಳು ವಾಗ್ವಾದ ನಡೆಸಿದರು. ಈ ವೇಳೆ ಪೊಲೀಸರ ವಿರುದ್ಧವೂ ಹರಿಹಾಯ್ದರು. ಪರೀಕ್ಷಾರ್ಥಿಗಳ ಮನವೊಲಿಕೆಗೆ ಸಿಬ್ಬಂದಿ ಯತ್ನಿಸಿದರೂ ಸುಮ್ಮನಾಗದ ಅಭ್ಯರ್ಥಿಗಳು ಪ್ರಶ್ನೆ ಪತ್ರಿಕೆ ಅದಲು, ಬದಲು ಆಗಿದೆ ಎಂದು ಅಭ್ಯರ್ಥಿಗಳು ಅಸಮಾಧಾನ ಹೊರ ಹಾಕಿದರು.
ಬಳಿಕ ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿ, ಕೆಪಿಎಸ್ಸಿಯಿಂದ ಹೆಚ್ಚುವರಿ ಸಮಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದ ಬಳಿಕ ಅಭ್ಯರ್ಥಿಗಳು ಸುಮ್ಮನಾಗಿ, ಪರೀಕ್ಷೆ ಬರೆಯಲು ತಮ್ಮ ಕೊಠಡಿಗಳಿಗೆ ತೆರಳಿದರು.
ಈ ಸಂಬಂಧ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್, 'ತಾಂತ್ರಿಕ ಕಾರಣಗಳಿಂದ ಕೆಎಎಸ್ ಪ್ರಶ್ನೆ ಪ್ರತಿಕೆ-1 ಟ್ರಂಕ್ ಓಪನ್ ಆಗಿರಲಿಲ್ಲ. ಬಳಿಕ ವಿಡಿಯೋ ಚಿತ್ರೀಕರಣ ಸಹಿತ ಟ್ರಂಕ್ ಓಪನ್ ಮಾಡಿ, ಪ್ರಶ್ನೆ ಪತ್ರಿಕೆ ನೀಡಲಾಯಿತು. ಹೀಗಾಗಿ ಮೊದಲ ಪರೀಕ್ಷೆಗೆ ಸ್ವಲ್ಪ ವಿಳಂಬವಾಗಿದೆ. ಕೆಪಿಎಸ್ಸಿ ಅನುಮತಿ ಪಡೆದು ಅಭ್ಯರ್ಥಿಗಳಿಗೆ ಹೆಚ್ಚುವರಿ ಸಮಯ ಕೊಡಿಸಲಾಗಿದೆ' ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಪಿಎಸ್ಐ ಅಕ್ರಮ: ಪರೀಕ್ಷೆ ಮುಗಿದ ನಾಲ್ಕೇ ದಿನಕ್ಕೆ ಒಎಂಆರ್ ಶೀಟ್ ತಿದ್ದಿದ ಪೊಲೀಸರು