ಬೆಂಗಳೂರು: ಒಂಟಿಯಾಗಿ ನೆಲೆಸಿದ್ದ ವೃದ್ಧೆಯ ಕೈ, ಕಾಲು ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಿದ ದುಷ್ಕರ್ಮಿಗಳು ಶವವನ್ನು ಡ್ರಮ್‌ನಲ್ಲಿ ತುಂಬಿ ಬೀದಿಗೆ ಬಿಸಾಡಿ ಪರಾರಿಯಾಗಿದ್ದಾರೆ. ಹಣಕಾಸಿನ ವಿಚಾರಕ್ಕೆ ಪರಿಚಯಸ್ಥರೇ ಕೃತ್ಯ ಎಸಗಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆ.ಆರ್. ಪುರದ ನಿಸರ್ಗ ಲೇಔಟ್ ನಿವಾಸಿ ಸುಶೀಲಮ್ಮ (65) ಮೃತ ವೃದ್ಧೆ. ಈ ಸಂಬಂಧ ವೃದ್ಧೆಯ ಪರಿಚಿತ ದಿನೇಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಿಸರ್ಗ ಲೇಔಟ್‌ನ ಮನೆಗಳ ಓಣಿಯಲ್ಲಿ ಅನಾಥವಾಗಿ 10 ಲೀಟರ್ ಸಾಮರ್ಥ್ಯದ ಡ್ರಮ್ ಇಟ್ಟಿರುವುದನ್ನು ಗಮನಿಸಿದ ಸ್ಥಳೀಯರು, ಅದರ ಬಳಿ ಹೋಗಿ ನೋಡಿದಾಗ ಶವ ಪತ್ತೆಯಾಗಿದೆ. ಮಾಹಿತಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಸುಶೀಲಮ್ಮ, 10 ವರ್ಷಗಳಿಂದ ನಿಸರ್ಗ ಲೇಔಟ್‌ನಲ್ಲಿ ನೆಲೆಸಿದ್ದರು. ವೃದ್ಧೆಗೆ ಓರ್ವ ಪುತ್ರ ಹಾಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆಸ್ತಿ ಮಾರಾಟದಲ್ಲಿ ಬಂದ ಹಣದಲ್ಲಿ 8 ಲಕ್ಷ ರೂ.ಗೆ ಮನೆ ಬೋಗ್ಯಕ್ಕೆ ಪಡೆದು, ಮಕ್ಕಳಿಂದ ಪ್ರತ್ಯೇಕವಾಗಿ ಅಜ್ಜಿ ವಾಸವಾಗಿದ್ದರು.
ಅದೇ ಕಟ್ಟಡದಲ್ಲಿ ಅವರ ಕಿರಿಯ ಪುತ್ರಿ ಮತ್ತು ಸಮೀಪದಲ್ಲೇ ಮಗ ನೆಲೆಸಿದ್ದ. ಪುತ್ರ ಪ್ರತಿ ತಿಂಗಳು ತಾಯಿಗೆ 2-3 ಸಾವಿರ ರೂ. ನೀಡುತ್ತಿದ್ದರು. ಬಿಜೆಪಿಯಲ್ಲಿ ಸಕ್ರಿಯ ಕಾರ್ಯಕರ್ತೆ ಆಗಿದ್ದ ಸುಶೀಲಮ್ಮ, ಚುನಾವಣಾ ಪ್ರಚಾರ ಸಹ ನಡೆಸಿದ್ದರು. ಈ ವೇಳೆ ದಿನೇಶ್ ಎಂಬಾತನ ಪರಿಚಯವಾಗಿದ್ದು, ಆಗಾಗ್ಗೆ ಅಜ್ಜಿಗೆ ಮನೆಗೆ ಬಂದು ಹೋಗುತ್ತಿದ್ದ. ಈ ಹತ್ಯೆಗೆ ನಿಖರವಾಗಿ ಕಾರಣ ಗೊತ್ತಾಗಿಲ್ಲ.
ಹಣಕ್ಕಾಗಿ ದಿನೇಶ್ ಕೃತ್ಯ ಎಸಗಿರುವ ಶಂಕೆ ಇದೆ. ಮನೆಯಲ್ಲಿ ಅಜ್ಜಿ ಜೊತೆ ದಿನೇಶ್ ಮಾತನಾಡುತ್ತ ನಿಂತಿದ್ದ ದೃಶ್ಯವನ್ನು ಮೊಮ್ಮಗಳು ನೋಡಿದ್ದಳು. ಇದಾದ ಬಳಿಕ ಅಜ್ಜಿಯ ಕೊಲೆಯಾಗಿದೆ ಎಂದು ತಿಳಿದುಬಂದಿದೆ. ವಿಷಯ ತಿಳಿದ ಪೊಲೀಸರು ದಿನೇಶ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಸ್ಥಳಕ್ಕೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಮತ್ತು ಹೆಚ್ಚುವರಿ ಪೊಲೀಸ್ ಆಯುಕ್ತ ರಮಣ್ ಗುಪ್ತ, ವೈಟ್‌ಫೀಲ್ಡ್ ಡಿಸಿಪಿ ಶಿವಕುಮಾರ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕೆ.ಆರ್.ಪುರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಆನೇಕಲ್: ನಡುರಸ್ತೆಯಲ್ಲೇ ಯುವಕನ ಬರ್ಬರ ಹತ್ಯೆ