ಬೆಂಗಳೂರು: "ಕರ್ನಾಟಕ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾದ ಜಯಪ್ರಕಾಶ್ ಹೆಗಡೆ ಅವರು, ಕರ್ನಾಟಕ ಸರ್ಕಾರಕ್ಕೆ ಸಲ್ಲಿಸಿದ ಕಾಂತರಾಜು ಆಯೋಗದ ವರದಿಯನ್ನು ರಾಜ್ಯ ಒಕ್ಕಲಿಗರ ಹೋರಾಟ ಸಮಿತಿ ವಿರೋಧಿಸುತ್ತದೆ" ಎಂದು ರಾಜ್ಯ ಒಕ್ಕಲಿಗರ ಸಂಘದ ಗೌರವಾಧ್ಯಕ್ಷ ಬಿ. ಕೆಂಚಪ್ಪಗೌಡ ಹೇಳಿದರು. ಶುಕ್ರವಾರ ನಗರದ ಪ್ರೆಸ್ಕ್ಲಬ್ನಲ್ಲಿ ಮಾತನಾಡಿದ ಅವರು, "ಕಾಂತರಾಜು ಆಯೋಗ ಮನೆಮನೆಗೂ ತೆರಳಿ ಸರ್ವೆ ಮಾಡಿ ಮಾಹಿತಿಯನ್ನು ಪಡೆದಿಲ್ಲ. ನಮ್ಮ ಸಮಾಜದ ಹಿರಿಯರು ಸಹಿಯನ್ನು ಮಾಡಿ ಮನವಿ ಸಲ್ಲಿಸಿದರೂ ಕೂಡ ಆಯೋಗ ವರದಿಯನ್ನು ಸರಿಪಡಿಸದೆ ಸರ್ಕಾರಕ್ಕೆ ಸಲ್ಲಿಸಲಾಗಿದೆ" ಎಂದು ದೂರಿದರು.
"ಕಾಂತರಾಜು ಆಯೋಗ ವರದಿಯು 2014-2015ನೇ ಸಾಲಿನಲ್ಲಿ ದತ್ತಾಂಶದ ಮಾಹಿತಿಯನ್ನು ಸಂಗ್ರಹಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಕರ್ನಾಟಕ ಹಿಂದುಳಿ ವರ್ಗಗಳ ಆಯೋಗದ ಕಾಯ್ದೆಯ ಪ್ರಕಾರ ಪ್ರತಿ 10 ವರ್ಷಕ್ಕೊಮ್ಮೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯನ್ನು ನೀಡಬೇಕಾಗುತ್ತದೆ. ಈ ವರದಿ ದತ್ತಾಂಶ ಸಂಗ್ರಹಿಸಿ ಸುಮಾರು 10 ವರ್ಷಗಳು ಕಳೆದು ಹೋಗಿರುವುದರಿಂದ ಈ ವರದಿಯನ್ನು ತಿರಸ್ಕರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದ್ದೆವು" ಎಂದು ತಿಳಿಸಿದರು.
"ನಮ್ಮ ಒಕ್ಕಲಿಗ ಸಮಾಜದ ಎಲ್ಲಾ ಉಪಪಂಗಡಗಳನ್ನು ಒಟ್ಟಿಗೆ ಸೇರಿಸಿ ವರದಿಯನ್ನು ನೀಡಬೇಕೆಂದು ಆಯೋಗಕ್ಕೆ ಮನವಿ ಮಾಡಲಾಗಿದ್ದರೂ ಕೂಡ ಆಯೋಗ ಪರಿಗಣಿಸಿಲ್ಲ. ಕಾಂತರಾಜು ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಮಯದಲ್ಲಿ ಜಾತಿ ಜನಗಣತಿಯನ್ನು ಸಹ ಮಾಡಿಸಿದೆ ಎಂದು ತಿಳಿದು ಬಂದಿದೆ, ಜಾತಿ ಜನಗಣತಿ ಶೆಡ್ಯೂಲ್ 7 ರ ವಿಷಯದಲ್ಲಿ ಜನಗಣತಿಯನ್ನು ಸಮೀಕ್ಷೆ ಮಾಡಲಾಗಿದೆ" ಎಂದು ವರದಿಯಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.
"ಪ್ರಸ್ತುತ ರಾಜ್ಯದ ಜನಸಂಖ್ಯೆ 7 ಕೋಟಿ 20 ಲಕ್ಷ, ಆದರೆ ಸಮೀಕ್ಷೆ ಆಗಿರುವ ಜನಸಂಖ್ಯೆ 5 ಕೋಟಿ 98 ಲಕ್ಷ ಮಾತ್ರ. ಇನ್ನು ಉಳಿದ 1 ಕೋಟಿ 22 ಲಕ್ಷ ಜನಸಂಖ್ಯೆಯನ್ನು ಸಮೀಕ್ಷೆಯಲ್ಲಿ ಪರಿಗಣಿಸಿಲ್ಲ. ಈ ಎಲ್ಲಾ ಅಂಶಗಳು ಸರಿ ಇಲ್ಲದ ಕಾರಣ ಒಕ್ಕಲಿಗ ಸಮಾಜ ವಿರೋಧ ವ್ಯಕ್ತಪಡಿಸುತ್ತದೆ. ಸಂಪೂರ್ಣ ವರದಿಯನ್ನು ಪಡೆದ ನಂತರ ಸಚಿವರು ಶಾಸಕರು, ಸಂಸದರು ಹಾಗೂ ಸಮಾಜದ ಹಿರಿಯರು ಸಭೆ ನಡೆಸಿ ಚರ್ಚಿಸಿ ಮುಂದಿನ ಹೋರಾಟದ ಬಗ್ಗೆ ರೂಪುರೇಷೆಗಳನ್ನು ನಿರ್ಧರಿಸಲಾಗುವುದು" ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಗಾ.ನಂ. ಶ್ರೀಕಂಠಯ್ಯ, ರಾಜ್ಯ ಒಕ್ಕಲಿಗರ ಮೀಸಲಾತಿ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಆಡಿಟರ್ ನಾಗರಾಜ್ ಯಲಚವಾಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಜಾತಿಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ಮುಂದಿನ ತೀರ್ಮಾನ: ಸಿಎಂ ಸಿದ್ದರಾಮಯ್ಯ