ಹುಬ್ಬಳ್ಳಿ: ವಿಶ್ವವಿಖ್ಯಾತ ಪ್ರವಾಸಿ ತಾಣ ಜೋಗ ಜಲಪಾತದ ವೀಕ್ಷಣೆಗೆ ಪ್ರತಿ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ವಿಶೇಷ ಸಾರಿಗೆ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಈ ಬಸ್ಗಳು ಗೋಕುಲ ರಸ್ತೆ ನಿಲ್ದಾಣದಿಂದ ಹೊರಡುತ್ತವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ತಿಳಿಸಿದ್ದಾರೆ.
ಇತ್ತೀಚೆಗೆ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮೈದುಂಬಿರುವ ಜಲಪಾತಗಳು ಪ್ರವಾಸಿಗರನ್ನು ಸೆಳೆಯುತ್ತಿವೆ. ಜೋಗ ಜಲಪಾತವೂ ಜನರನ್ನು ಆಕರ್ಷಿಸುತ್ತಿದ್ದು, ಪ್ರಕೃತಿ ಸೌಂದರ್ಯ ಅನನ್ಯವಾಗಿದೆ. "ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ" ಎನ್ನುವಂತೆ ಕಣ್ಮನ ಸೆಳೆಯುವ ಜಲಪಾತದ ದೃಶ್ಯ ವೈಭವ ಸವಿಯಲು ಇದು ಸಕಾಲ.
ಸಾರ್ವಜನಿಕರ ಬೇಡಿಕೆಯ ಮೇರೆಗೆ ಜೋಗ ಜಲಪಾತ ವೀಕ್ಷಿಸಲು ಕುಟುಂಬ ಸದಸ್ಯರೊಂದಿಗೆ ಹೋಗಿ ಬರಲು ಅನುಕೂಲವಾಗುವಂತೆ ಭಾನುವಾರ ಹಾಗೂ ಸಾರ್ವಜನಿಕ ರಜಾ ದಿನಗಳಂದು ಹುಬ್ಬಳ್ಳಿಯಿಂದ ರಾಜಹಂಸ ಹಾಗೂ ಮಲ್ಟಿ ಎಕ್ಸೆಲ್ ವೋಲ್ವೋ ಎಸಿ ವಿಶೇಷ ಬಸ್ಗಳ ವ್ಯವಸ್ಥೆ ಮಾಡಲಾಗಿದೆ. ಮಾರ್ಗಮಧ್ಯದಲ್ಲಿ ಶಿರಸಿ ಮಾರಿಕಾಂಬಾ ದೇವಿಯ ದರ್ಶನಕ್ಕೂ ಅವಕಾಶ ಕಲ್ಪಿಸಲಾಗಿದೆ. ಜೋಗದಲ್ಲಿ ಜಲಪಾತ ವೀಕ್ಷಣೆ ಹಾಗೂ ಪ್ರಕೃತಿ ಸೌಂದರ್ಯದ ಸೊಬಗು ಆನಂದಿಸಲು ಸಾಕಷ್ಟು ಸಮಯಾವಕಾಶ ಕಲ್ಪಿಸಲಾಗಿದೆ.
ಇದನ್ನೂ ಓದಿ: ಆರಿದ್ರಾ ಮಳೆಯಿಂದ ಕೆರೆ ಕಟ್ಟೆ, ಡ್ಯಾಂಗಳಿಗೆ ಜೀವಕಳೆ: ಧುಮ್ಮಿಕ್ಕಿ ಹರಿಯುತ್ತಿರುವ ಜೋಗ ಜಲಪಾತ - Heavy Rain
ರಾಜಹಂಸ ಬಸ್: ಹುಬ್ಬಳ್ಳಿಯಿಂದ ಬೆಳಗ್ಗೆ 7-30 ಗಂಟೆಗೆ ಹೊರಡುತ್ತದೆ. 11-45ಕ್ಕೆ ಜೋಗ ಜಲಪಾತ ತಲುತ್ತದೆ. ಬಳಿಕ ಅಲ್ಲಿಂದ ಸಂಜೆ 5-00 ಗಂಟೆಗೆ ಹೊರಟು, ರಾತ್ರಿ 9-30ಕ್ಕೆ ಹುಬ್ಬಳ್ಳಿಗೆ ಆಗಮಿಸಲಿದೆ. ಪ್ರಯಾಣ ದರ 430 ರೂ. ನಿಗದಿಪಡಿಸಲಾಗಿದೆ.
ವೋಲ್ವೊ ಎಸಿ ಬಸ್: ಈ ಬಸ್ ಹುಬ್ಬಳ್ಳಿಯಿಂದ ಬೆಳಗ್ಗೆ 8-00 ಗಂಟೆಗೆ ಹೊರಟು, 12-00 ಗಂಟೆಗೆ ಜೋಗ ಜಲಪಾತ ತಲುಪಲಿದೆ. ಅಲ್ಲಿಂದ ಸಂಜೆ 5-00ಕ್ಕೆ ಹೊರಡುವ ಬಸ್, ಹುಬ್ಬಳ್ಳಿಗೆ ರಾತ್ರಿ 9-00ಕ್ಕೆ ಮರಳಲಿದೆ. ಪ್ರಯಾಣ ದರ 600 ರೂ. ನಿಗದಿ ಮಾಡಲಾಗಿದೆ.
ಮುಂಗಡ ಬುಕ್ಕಿಂಗ್: ಈ ವಿಶೇಷ ಬಸ್ಗಳಿಗೆ www.ksrtc.in ಮತ್ತು KSRTC Mobile App ಮೂಲಕ ಆನ್ಲೈನ್ನಲ್ಲಿ ಹಾಗೂ ಗೋಕುಲ ರಸ್ತೆ ಬಸ್ ನಿಲ್ದಾಣ ಮತ್ತು ಹೊಸೂರು ಬಸ್ ನಿಲ್ದಾಣದಲ್ಲಿ ಮುಂಗಡ ಬುಕ್ಕಿಂಗ್ ಮಾಡಲು ಅವಕಾಶ ಕಲ್ಪಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ 7760991682 ಅಥವಾ 7760991674ಕ್ಕೆ ಸಂಪರ್ಕಿಸಬಹುದು. ಆದರೆ ಇವು ಪ್ರೀಮಿಯರ್ ಬಸ್ಗಳು ಆಗಿರುವುದರಿಂದ ಶಕ್ತಿ ಯೋಜನೆ ಅನ್ವಯಿಸುವುದಿಲ್ಲ ಎಂದು ಹುಬ್ಬಳ್ಳಿ ಗ್ರಾಮಾಂತರ ವಿಭಾಗೀಯ ನಿಯಂತ್ರಣಾಧಿಕಾರಿ ಹೆಚ್.ರಾಮನಗೌಡರ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಚಾರ್ಮಾಡಿ ಘಾಟ್ನಲ್ಲಿ ಪ್ರವಾಸಿಗರ ಆಕರ್ಷಿಸುತ್ತಿರುವ ಜಲವೈಭವ: ವಿಡಿಯೋ - Falls In Charmadi Ghat