ಹುಬ್ಬಳ್ಳಿ: ರಾಜ್ಯದ ನಾನಾ ಜಿಲ್ಲೆಗಳಲ್ಲಿ ಮನೆ ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಅಂತರ್‌ಜಿಲ್ಲಾ ಕಳ್ಳನನ್ನು ಇಲ್ಲಿನ ಕೇಶ್ವಾಪೂರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮಹಮ್ಮದ್ ಅಲಿ ನಾಲಬಂದ ಬಂಧಿತ ಆರೋಪಿ. ಈತನಿಂದ 3.10 ಲಕ್ಷ ರೂ ಮೌಲ್ಯದ 47 ಗ್ರಾಂ ಚಿನ್ನಾಭರಣ ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ.
ನಾಗಶೆಟ್ಟಿಕೊಪ್ಪದ ಶಾಂಡಿಲ್ಯಾಶ್ರಮದ ಸಮೀಪದ ಮನೆಯೊಂದರಲ್ಲಿ ಇತ್ತೀಚಿಗೆ ಹಾಡಹಗಲೇ ಆರೋಪಿ ಕಳ್ಳತನ ಮಾಡಿದ್ದ. ಅಶೋಕ ನಗರ ಠಾಣಾ ವ್ಯಾಪ್ತಿಯ ವಿಜಯ ನಗರದಲ್ಲೂ ಹಗಲು ಹೊತ್ತು ಮನೆ ಕಳ್ಳತನ ಮಾಡಿದ್ದಾನೆ. ಇದೀಗ ಉಪನಗರ ಠಾಣಾ ವ್ಯಾಪ್ತಿಯಲ್ಲಿ ಬೈಕ್ ಕಳ್ಳತನ ಸೇರಿದಂತೆ ಮೂರು ಪ್ರಕರಣಗಳಲ್ಲಿ ಕದ್ದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹೊಸಪೇಟೆ, ಕೊಪ್ಪಳ, ಗದಗ, ಹುಬ್ಬಳ್ಳಿ - ಧಾರವಾಡ ಸೇರಿ ಒಟ್ಟು 19 ಪ್ರಕರಣಗಳಲ್ಲಿ ಈತ ಭಾಗಿಯಾಗಿದ್ದಾನೆ ಎಂದು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ಮಾಹಿತಿ ನೀಡಿದ್ದಾರೆ.