ಬೆಂಗಳೂರು: ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮೊದಲ ಹಂತದ ಮತದಾನಕ್ಕೆ ಚುನಾವಣಾ ಆಯೋಗ ಇಂದು ಅಧಿಸೂಚನೆ ಪ್ರಕಟಿಸಲಿದೆ. ಲೋಕಸಭಾ ಚುನಾವಣೆಗೆ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ನಾಮಪತ್ರಗಳ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದೆ. ಚುನಾವಣಾ ಆಯೋಗವು ಗುರುವಾರ (ಮಾ.28) ಅಧಿಕೃತವಾಗಿ ಅಧಿಸೂಚನೆ ಹೊರಡಿಸಲಿದ್ದು, ರಾಜಕೀಯ ಪಕ್ಷಗಳ ಮತ ಸಮರಕ್ಕೆ ಚಾಲನೆ ಸಿಗಲಿದೆ.
ಮೊದಲ ಹಂತದಲ್ಲಿ ರಾಜ್ಯದ ದಕ್ಷಿಣ ಕರ್ನಾಟಕ, ಹಳೇ ಮೈಸೂರು ಹಾಗೂ ಬಯಲುಸೀಮೆ ಭಾಗದ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಈ ಕ್ಷೇತ್ರಗಳಿಗೆ ಏಪ್ರಿಲ್ 26 ರಂದು ಮತದಾನ ನಡೆಯಲಿದೆ. ಮೊದಲ ಹಂತದ ವೇಳಾಪಟ್ಟಿ ವಿವರ ಹೀಗಿದೆ.
ಈ 14 ಲೋಕಸಭಾ ಕ್ಷೇತ್ರಗಳಲ್ಲಿ ಇಂದಿನಿಂದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಕೆಗೆ ಏಪ್ರಿಲ್ 4 ರಂದು ಕೊನೆಯ ದಿನವಾಗಿದೆ. ಏ.5 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಏ.8 ರಂದು ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ಮತದಾನ ಏ.26 ರಂದು ನಡೆಯಲಿದ್ದು, ಜೂನ್ 4 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಕರ್ನಾಟಕದಲ್ಲಿ 28 ಲೋಕಸಭಾ ಕ್ಷೇತ್ರಗಳಿದ್ದು, ಕೇಂದ್ರ ಚುನಾವಣಾ ಆಯೋಗ ಎರಡು ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನಿಸಿದೆ. ಮೊದಲ ಹಂತದಲ್ಲಿ ಮತದಾನ 14 ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ಜರುಗಲಿದೆ.
ಮೊದಲ ಹಂತದ 14 ಲೋಕಸಭಾ ಕ್ಷೇತ್ರಗಳು: ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರ (ಎಸ್ಸಿ ಮೀಸಲು ಕ್ಷೇತ್ರ), ಉಡುಪಿ- ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ(ಎಸ್ಸಿ ಮೀಸಲು ಕ್ಷೇತ್ರ), ತುಮಕೂರು, ಮಂಡ್ಯ, ಮೈಸೂರು-ಕೊಡಗು, ಚಾಮರಾಜನಗರ (ಎಸ್ಸಿ ಮೀಸಲು ಕ್ಷೇತ್ರ)
ಯುಪಿಎ ಮೈತ್ರಿಕೂಟ ಬಿಜೆಪಿಗೆ ಪ್ರಬಲ ಸ್ಪರ್ಧೆ ನೀಡುವಲ್ಲಿ 2019ರಲ್ಲಿ ವಿಫಲವಾಗಿತ್ತು. ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್, ಹಾಸನ ಕ್ಷೇತ್ರಗಳಲ್ಲಿ ಜೆಡಿಎಸ್ ಗೆದ್ದಿತ್ತು. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಿದ್ದರು. ಉಳಿದಂತೆ ಈ ಭಾಗದ 11 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಕಂಡಿತ್ತು. ಈಗ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿವೆ.
ಇದನ್ನೂಓದಿ:ಮನೆಯಿಂದ ಮತದಾನ ಆಯ್ದುಕೊಂಡರೆ ಮತಗಟ್ಟೆಯಲ್ಲಿ ಅವಕಾಶ ಸಿಗದು: ಮುಲ್ಲೈ ಮುಗಿಲನ್ - vote from home