ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿ (ಎ-1) ಜೈಲು ಸೇರಿರುವ ಟಟಿ ಪವಿತ್ರಾ ಗೌಡ ಪೊಲೀಸ್ ವಶದಲ್ಲಿರುವಾಗ ಲಿಪ್ ಸ್ಟಿಕ್ ಸೇರಿದಂತೆ ಇತರೆ ಸೌಂದರ್ಯ ವರ್ಧಕ ಬಳಸಿರುವ ಆರೋಪ ಕೇಳಿ ಬಂದಿದೆ. ಅಲ್ಲದೆ ಇದಕ್ಕೆ ಅನುವು ಮಾಡಿಕೊಟ್ಟಿದ್ದಾರೆ ಎನ್ನಲಾದ ಮಹಿಳಾ ಪಿಎಸ್ಐಗೆ ನೋಟಿಸ್ ನೀಡಲಾಗಿದೆ.
ಹತ್ಯೆ ಪ್ರಕರಣದಲ್ಲಿ ಬಂಧಿತೆಯಾಗಿ 10 ದಿನಗಳ ಕಾಲ ಪೊಲೀಸ್ ಬಂಧನದಲ್ಲಿರುವಾಗ ಪವಿತ್ರಾ ಲಿಪ್ ಸ್ಟಿಕ್ ಸೇರಿ ಇನ್ನಿತರೆ ಸೌಂದರ್ಯ ವರ್ಧಕಗಳನ್ನು ಬಳಸಿದ್ದರು ಎನ್ನಲಾಗಿದೆ. ಲಿಪ್ ಸ್ಟಿಕ್ ಬಳಸಿದ್ದು ಮಾಧ್ಯಮಗಳ ವಿಡಿಯೋಗಳಲ್ಲಿ ಸೆರೆಯಾಗಿತ್ತು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್ ಅವರು ಪವಿತ್ರಾ ಗೌಡರ ಭದ್ರತೆ ವಹಿಸಿಕೊಂಡಿದ್ದ ವಿಜಯನಗರ ಮಹಿಳಾ ಪಿಎಸ್ಐಗೆ ರೂಲ್ ನಂಬರ್ 7ರಡಿ ಮೆಮೊ ನೀಡಿ ವಿವರಣೆ ಕೇಳಿದ್ದಾರೆ. ಬಂಧನ ಅವಧಿಯಲ್ಲಿ ಪವಿತ್ರಾ ಅವರನ್ನು ಪ್ರತಿದಿನ ರಾತ್ರಿ ಮಹಿಳಾ ಸಾಂತ್ವನ ಕೇಂದ್ರಕ್ಕೆ ಕರೆದೊಯ್ದು, ವಾಸ್ತವ್ಯಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಬೆಳಗ್ಗೆ ಅಲ್ಲಿಂದ ಕರೆತಂದು ಪೊಲೀಸ್ ವಿಚಾರಣೆಗೆ ಹಾಜರುಪಡಿಸಿ ನಂತರ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಇದರ ನೇತೃತ್ವವನ್ನ ಮಹಿಳಾ ಪಿಎಸ್ಐಗೆ ನೀಡಲಾಗಿತ್ತು. ಸದ್ಯ ಅವರಿಗೆ ಮೆಮೊ ನೀಡಲಾಗಿದ್ದು, ಇದಕ್ಕೆ ಉತ್ತರ ನೀಡಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕುಟುಂಬದ ಬೆಂಬಲಕ್ಕೆ ನಿಂತ ಧ್ರುವ ಸರ್ಜಾ ಅಭಿಮಾನಿಗಳು - Dhruva Sarja Fans
ಮಹಿಳಾ ಸಾಂತ್ವನ ಕೇಂದ್ರದಲ್ಲಿ ಪವಿತ್ರಾಗೆ ಕುಟುಂಬಸ್ಥರು ಬಟ್ಟೆ ನೀಡುವಾಗ ಅದರೊಳಗೆ ಲಿಪ್ ಸ್ಟಿಕ್ ಇಡಲಾಗಿದ್ದು, ಬಟ್ಟೆ ಧರಿಸುವಾಗ ಸೌಂದರ್ಯವರ್ಧಕ ಬಳಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.