ಹಾವೇರಿ: ಸಂಗೂರು ಸಕ್ಕರೆ ಕಾರ್ಖಾನೆಯ ಗುತ್ತಿಗೆ ಪಡೆದಿರುವ ಜಿ ಎಂ ಶುಗರ್ಸ್ ಕಂಪನಿ ಪೂರೈಸಿದ್ದ ಕಬ್ಬಿಗೆ ಈ ವರೆಗೆ ಹಣ ನೀಡಿಲ್ಲ ಎಂದು ರೈತರು ಆರೋಪಿಸಿ, ಕಾರ್ಖಾನೆಯಿಂದ ಸಾಗಣೆ ಮಾಡುತ್ತಿದ್ದ ಸಕ್ಕರೆ ತುಂಬಿದ್ದ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದರು.
ಸಕ್ಕರೆ ಕಾರ್ಖಾನೆಯ ಆವರಣದ ಜಿ ಎಂ ಸೌಹಾರ್ದ ಬ್ಯಾಂಕ್ ಮತ್ತು ಕಾರ್ಖಾನೆ ಪ್ರಮುಖ ಗೇಟ್‌ಗಳಿಗೆ ಬುಧವಾರ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದ ರೈತರು, ಕಾರ್ಖಾನೆಗೆ ನವಂಬರ್ ತಿಂಗಳಿಂದ ಕಬ್ಬು ಪೂರೈಸಿದ್ದೇವೆ. ಆದರೆ, ಕಾರ್ಖಾನೆ ಮಾಲೀಕರು ಡಿಸೆಂಬರ್ 13ರ ವರೆಗೆ ಕಬ್ಬು ಪೂರೈಸಿದ ರೈತರಿಗೆ ಮಾತ್ರ ಹಣ ಪಾವತಿಸಿ, ಆ ಬಳಿಕ ಪೂರೈಕೆ ಆದ ಕಬ್ಬಿನ ಬಾಕಿಯನ್ನು ಇದುವರೆಗೂ ಪಾವತಿ ಮಾಡಿಲ್ಲ ಎಂದು ಆರೋಪಿಸಿದರು.
ಈ ರೀತಿ ಸುಮಾರು 50 ಕೋಟಿಗೂ ಹೆಚ್ಚು ಹಣವನ್ನು ಕಾರ್ಖಾನೆ ಮಾಲೀಕರು ಪಾವತಿ ಮಾಡಿಲ್ಲ. ರಾಜ್ಯದಲ್ಲಿ ತೀವ್ರ ಬರಗಾಲವಿದೆ, ಈ ವರ್ಷ ಸಾಲಸೋಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಬಾರದೇ ಬರಗಾಲದ ಛಾಯೆ ಆವರಿಸಿದೆ. ಈ ಸಂದರ್ಭದಲ್ಲಿ ಹಗಲುರಾತ್ರಿ ನಿದ್ದೆಗೆಟ್ಟು ವಿದ್ಯುತ್ ಇದ್ದಾಗ ನೀರು ಹಾಯಿಸಿ ಬೆಳೆದ ಕಬ್ಬಿಗೆ ಕಾರ್ಖಾನೆ ಮಾಲೀಕರು ಹಣ ನೀಡದೇ ಇರುವುದನ್ನು ರೈತರನ್ನು ಹತಾಶರನ್ನಾಗಿ ಮಾಡಿದೆ. ಕಬ್ಬು ಕಟಾವಿಗೆ ಬಂದಿದ್ದ ಕೂಲಿ ಕಾರ್ಮಿಕರಿಗೂ ಸಹ ನಾವು ಹಣ ನೀಡಿಲ್ಲ. ಅವರು ಬಂದು ನಮ್ಮ ಮನೆ ಮುಂದೆ ಅಲೆಯುತ್ತಿದ್ದಾರೆ, ಏನು ಮಾಡಬೇಕು ಎಂದು ರೈತರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಕಬ್ಬು ಬೆಳೆಯ ಹಣ ಪಡೆಯಲು ನಿತ್ಯ ಕಾರ್ಖಾನೆಗೆ ಅಲೆಯಬೇಕಾಗಿದೆ. ನಾನು ಕಾರ್ಖಾನೆಗೆ 80 ಟನ್ ಕಬ್ಬು ಪೂರೈಸಿದ್ದೇನೆ. ಕನಿಷ್ಠ ಎರಡು ಲಕ್ಷ ರೂಪಾಯಿ ಹಣ ಬರಬೇಕಿದೆ. ಸದ್ಯ 50 ಸಾವಿರ ರೂಪಾಯಿ ಆದರೂ ನೀಡಿ ಎಂದರೂ ನೀಡುತ್ತಿಲ್ಲ. ಕಬ್ಬಿನ ಬಿಲ್ ಬರುತ್ತೆ ಎಂದು ಸಾಲ ಮಾಡಿದ್ದೇನೆ. ಸಾಲಗಾರರು ಮನೆಗೆ ಅಲೆದಾಡುತ್ತಿದ್ದಾರೆ. ಇಲ್ಲಿ ನೋಡಿದರೆ ಹಣ ನೀಡುತ್ತಿಲ್ಲ. ಈ ರೀತಿ ಮಾಡಿದರೆ ರೈತರು ಹೇಗೆ ಬದುಕಬೇಕು ಎಂದು ಹಾನಗಲ್ ತಾಲೂಕು ಉಪ್ಪುಣಿಸಿ ರೈತ ಶಂಬು ಬೇಸರ ವ್ಯಕ್ತಪಡಿಸಿದ್ದಾರೆ.
ಬಾಕಿ ಹಣ ನೀಡುವವರೆಗೆ ಬೀಗ ತಗೆಯುವುದಿಲ್ಲ: ಹಾವೇರಿ ತಾಲೂಕು ಸಂಗೂರು ಸಕ್ಕರೆ ಕಾರ್ಖಾನೆ 1983ರಲ್ಲಿ ಸಹಕಾರಿ ರಂಗದಲ್ಲಿ ಸ್ಥಾಪಿಸಲ್ಪಟ್ಟ ಅತಿದೊಡ್ಡ ಸಕ್ಕರೆ ಕಾರ್ಖಾನೆಗಳಲ್ಲಿ ಒಂದಾಗಿದೆ. ನಂತರ ರೈತರ ಕಾರ್ಖಾನೆಯನ್ನು ಸಮರ್ಪಕ ನಿರ್ವಹಿಸಲು ಆಗದೇ ಆಡಳಿತ ಮಂಡಳಿ, ಜಿ ಎಂ ಶುಗರ್ಸ್ ಕಂಪನಿಗೆ ವರ್ಷಕ್ಕೆ ಒಂದು ಕೋಟಿ 40 ಲಕ್ಷ ರೂಪಾಯಿ ಹಣಕ್ಕೆ ಗುತ್ತಿಗೆ ನೀಡಿದೆ. ಆದರೆ ಜಿ.ಎಂ.ಶುಗರ್ಸ್ ಕಂಪನಿ ಆರಂಭದಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸಿದ್ದು, ಬಿಟ್ಟರೆ ನಂತರ ಸರಿಯಾಗಿ ಹಣ ಪಾವತಿಸುತ್ತಿಲ್ಲ.
ಜಿ ಎಂ ಶುಗರ್ಸ್ ಕಂಪನಿ ಹಾಗೂ ಕಾರ್ಖಾನೆ ಆಡಳಿತವನ್ನು ಸಂಸದ ಜಿ.ಎಂ.ಸಿದ್ದೇಶ ಅವರ ಸಂಬಂಧಿಕರು ನಡೆಸುತ್ತಿದ್ದಾರೆ. ಕಬ್ಬಿನ ಬಿಲ್ ಬಾಕಿ ಉಳಿಸಿಕೊಂಡಿದ್ದಕ್ಕೆ ರೈತರೆಲ್ಲ ಸೇರಿ ಕಾರ್ಖಾನೆಯ ಬ್ಯಾಂಕ್ ಮತ್ತು ಪ್ರಮುಖ ಗೇಟ್‌ಗಳಿಗೆ ಬೀಗ ಜಡಿದು ಪ್ರತಿಭಟಿಸುತ್ತಿದ್ದೇವೆ. ಹಣ ನೀಡುವವರೆಗೂ ಬೀಗ ತೆಗೆಯುವುದಿಲ್ಲ. ಕಂಪನಿಯವರು ಈ ಕೂಡಲೇ ರೈತರ ಬಾಕಿ ಹಣ ನೀಡಬೇಕು ಎಂದು ಕಬ್ಬು ಬೆಳೆಗಾರರ ಸಂಘಧ ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪುರ್ ಆಗ್ರಹಿಸಿದರು.
ಈ ಕಂಪನಿ ಮಾಲೀಕರು ಪ್ರತಿವರ್ಷ ಇದೇ ರೀತಿ ರೈತರ ಹಣ ನೀಡಲು ಸತಾಯಿಸುತ್ತಾರೆ. ಕಳೆದ ಎರಡ್ಮೂರು ವರ್ಷದಿಂದ ರೈತರು ತಾವು ಪೂರೈಸಿದ ಕಬ್ಬಿನ ಹಣ ಪಡೆಯಲು ಪದೇ ಪದೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ. ಈ ಕುರಿತಂತೆ ಅಧಿಕಾರಿಗಳನ್ನು ಕೇಳಿದರೆ ಯಾವುದೇ ಮಾಹಿತಿ ನೀಡುವುದಿಲ್ಲ ಎಂದು ತಿಳಿಸಿದರು.
ಕಂಪನಿ ಹೇಳುತ್ತಿರುವುದೇನು?: ಈ ಕುರಿತಂತೆ ಕಾರ್ಖಾನೆ ಗುತ್ತಿಗೆ ಪಡೆದ ಜಿ.ಎಂ.ಲಿಂಗರಾಜು ದೂರವಾಣಿ ಮೂಲಕ ಮಾಧ್ಯಮಗಳೊಂದಿಗೆ ಮಾತನಾಡಿದ್ದು, ’’ಈಗಾಗಲೇ ರೈತರ ಹಣ ಪಾವತಿಗೆ ಕ್ರಮ ಕೈಗೊಂಡಿದ್ದೇವೆ. ಹಂತ ಹಂತವಾಗಿ ಹಣ ನೀಡುತ್ತೇವೆ. ಜನವರಿ ಆರಂಭದವರೆಗೆ ಕಬ್ಬು ಪೂರೈಸಿದ ರೈತರಿಗೆ ಹಣ ನೀಡಿದ್ದೇವೆ. ಹಣ ನೀಡುವ ಪ್ರಕ್ರಿಯೆ ನಿರಂತರವಾಗಿದ್ದು ಸುಮಾರು 25 ಕ್ಕೂ ಅಧಿಕ ಕೋಟಿ ಹಣವನ್ನು ನೀಡಬೇಕಿದೆ. ಆದಷ್ಟು ಬೇಗ ರೈತರ ಖಾತೆಗೆ ಹಣ ಹಾಕುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂಓದಿ:ತೆರಿಗೆದಾರರ ಹಣ ಬಳಸಿಕೊಂಡು ಕಾಂಗ್ರೆಸ್ ಸುಳ್ಳು ಹೇಳುತ್ತಿದೆ: ಪ್ರಹ್ಲಾದ್ ಜೋಶಿ