ಬೆಂಗಳೂರು: ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ ಮತ್ತು ಸಹವರ್ತಿಗಳಿಗೆ ಯಾವುದೇ ವಿಶೇಷ ಆತಿಥ್ಯ ಕೊಡಬೇಡಿ ಎಂದು ಸಿಎಂ ಸಿದ್ದರಾಮಯ್ಯ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಬೆಳಿಗ್ಗೆ ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಲು ಹೋದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಸಿಎಂ ಈ ಸೂಚನೆ ನೀಡಿದ್ದಾರೆ.
ಮಾಧ್ಯಮಗಳಲ್ಲಿ ಆರೋಪಿಗಳಾದ ನಟ ದರ್ಶನ್ ಹಾಗೂ ಸಹಚರರಿಗೆ ಸ್ಪೆಷಲ್ ಟ್ರೀಟ್ಮೆಂಟ್ ಕೊಡುತ್ತಿರುವ ಬಗ್ಗೆ ವರದಿಯಾಗುತ್ತಿವೆ. ಆರೋಪಿಗಳಿಗೆ ಯಾವುದೇ ವಿಶೇಷ ಆತಿಥ್ಯ ಕೊಡಬೇಡಿ. ಆರೋಪಿಗಳಿಗೆ ಆರೋಪಿಗೆ ನೀಡಬೇಕಾದ ಟ್ರೀಟ್ಮೆಂಟ್ ಕೊಡಿ. ಯಾವುದೇ ಸ್ಪೆಷಲ್ ಟ್ರಿಟ್ಮೆಂಟ್ ಬೇಡ. ಮಾಧ್ಯಮಗಳಲ್ಲಿ ಪೊಲೀಸ್ ಠಾಣೆ ಮುಚ್ಚಿದ್ದಾರೆ ಅಂತ ಸುದ್ದಿ ಆಗಿದೆ. ಟಿವಿ ಪೇಪರ್ಗಳಲ್ಲಿ ಬರ್ತಿದೆ What is personal interest ಎಂದು ಸಿಎಂ ಸಿದ್ದರಾಮಯ್ಯ ಅಸಮಾಧಾನ ಹೊರಹಾಕಿದರು ಎಂದು ತಿಳಿದುಬಂದಿದೆ.
ದರ್ಶನ್ ಬೆಂಬಲಿಗರು ಬರಬಹುದು ಹಾಗೂ ಮಾಧ್ಯಮಗಳು ವಿಡಿಯೋ ಮಾಡ್ತಾರೆ ಅಂತ ಶಾಮಿಯಾನ ಹಾಕಲಾಗಿದೆ ಎಂದು ಸಿಎಂಗೆ ಅಧಿಕಾರಿಗಳು ಸಮಜಾಯಿಷಿ ನೀಡಿದರು.
ರಾಜಾತಿಥ್ಯ ಯಾರಿಗೂ ಸಾಧ್ಯವಿಲ್ಲ: ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಆರೋಪಿಗಳನ್ನು ಕರೆದುಕೊಂಡು ಬಂದು ಯಾರೂ ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ಆತರದ್ದೇನೂ ಇಲ್ಲ. ಈ ಬಗ್ಗೆ ಮಾಧ್ಯಮಗಳ ವರದಿ ನೋಡಿ ಪೊಲೀಸರನ್ನು ಕೇಳಿದೆ. ಆದರೆ ಪೊಲೀಸರು ಆ ರೀತಿ ಏನೂ ಇಲ್ಲ ಅಂದಿದ್ದಾರೆ. ಇದರಲ್ಲಿ ಯಾವುದೇ ಮುಲಾಜಿಲ್ಲ. ಪೊಲೀಸರಿಗೆ ಸ್ವತಂತ್ರವಾಗಿ ತನಿಖೆ ಮಾಡಲು ಬಿಡೋಣ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಕೀಲರ ನಿಯೋಗದಿಂದ ಆರ್ಟಿಐ ಅಡಿ ಅರ್ಜಿ: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಸೇರಿ ಇನ್ನುಳಿದ ಆರೋಪಿಗಳಿಗೆ ರಾಜಾತಿಥ್ಯ ಕಲ್ಪಿಸಿದ ಆರೋಪದಡಿ ವಕೀಲರ ನಿಯೋಗವು ಸತ್ಯಾಸತ್ಯತೆ ಅರಿಯಲು ಠಾಣೆಯ 48 ಗಂಟೆಯೊಳಗಿನ ಸಿಸಿಟಿವಿ ದೃಶ್ಯಾವಳಿ ನೀಡುವಂತೆ ಆಗ್ರಹಿಸಿ ಆರ್ಟಿಐ ಅಡಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಅರ್ಜಿ ಸಲ್ಲಿಸಿದೆ.
ಠಾಣೆಗೆ ಶಾಮಿಯಾನ ಹಾಕಿರುವುದು ಮತ್ತು ಸಾರ್ವಜನಿಕರಿಗೆ ಠಾಣೆ ಪ್ರವೇಶ ನಿರಾಕರಿಸಿ 144 ಸೆಕ್ಷನ್ ಜಾರಿ ಮಾಡಲಾಗಿತ್ತು. ಜೊತೆಗೆ ಠಾಣೆಯ ಮುಂದಿನ ರಸ್ತೆಯನ್ನ ಬ್ಯಾರಿಕೇಡ್ ಹಾಕಿ ಸಾರ್ವಜನಿಕ ಪ್ರವೇಶ ನಿಷೇಧಿಸಲಾಗಿದ್ದರಿಂದ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದಾಗಿ ವಕೀಲರ ನಿಯೋಗವು ಇಂದು ಪೊಲೀಸ್ ಠಾಣೆಗೆ ಭೇಟಿ ನೀಡಿ, ಕಳೆದ 48 ಗಂಟೆಗಳ ಠಾಣೆಯ ಒಳಾಂಗಣ ಸಿಸಿಟಿವಿ ದೃಶ್ಯ ನೀಡುವಂತೆ ಅರ್ಜಿ ಸಲ್ಲಿಸಿದೆ.
ಇದನ್ನೂ ಓದಿ: ನಟ ದರ್ಶನ್ ಪ್ರಕರಣ ಮುಚ್ಚಿ ಹಾಕಲು ನನ್ನನ್ನು ಯಾರೂ ಸಂಪರ್ಕಿಸಿಲ್ಲ: ಡಿ.ಕೆ.ಶಿವಕುಮಾರ್ - D K Shivakumar