ಬೆಂಗಳೂರು: ''ಯಾರೂ ಕೂಡ ಆರೋಪಿಯನ್ನು ಕರೆದುಕೊಂಡು ಬಂದು ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ಅದನ್ನು ಯಾರೂ ಮಾಡಲ್ಲ'' ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರ ವರ್ತನೆಗೆ ಸಾರ್ವಜನಿಕರ ಆಕ್ರೋಶ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ''ಯಾರೂ ಕೂಡ ಆರೋಪಿಯನ್ನು ಕರೆದುಕೊಂಡು ಬಂದು ರಾಜಾತಿಥ್ಯ ಕೊಡಲು ಸಾಧ್ಯವಿಲ್ಲ. ಅದನ್ನ ಯಾರೂ ಮಾಡಕೂಡದು. ಆತರದ್ದೇನೂ ಇಲ್ಲ ಅಂತ ಪೊಲೀಸರು ಹೇಳಿದ್ದಾರೆ. ಬಿರಿಯಾನಿ ಬಗ್ಗೆ ನಾನು ಪೊಲೀಸರಿಗೆ ಕೇಳಿದೆ. ಹಾಗೇನೂ ಇಲ್ಲ ಅಂದಿದ್ದಾರೆ ಪೊಲೀಸರು. ಬೇರೆ ಆರೋಪಿಗಳ ತರವೇ ನೋಡುತ್ತಿರುವುದಾಗಿ ಪೊಲೀಸರು ನನಗೆ ಮಾಹಿತಿ ನೀಡಿದ್ದಾರೆ. ಇದರಲ್ಲಿ ಯಾವುದೇ ಮುಲಾಜಿಲ್ಲ ಅಂದಿದ್ದಾರೆ. ಅವರಿಗೆ ಸ್ವತಂತ್ರವಾಗಿ ತನಿಖೆ ಮಾಡಲು ಬಿಡೋಣ'' ಎಂದು ಪ್ರತಿಕ್ರಿಯಿಸಿದರು.
''ನಾನು ಪೊಲೀಸರಿಗೆ ಹೇಳುತ್ತೇನೆ. ಸರಿಯಾಗಿ ಜನರ ಹಿತದೃಷ್ಟಿಯಿಂದ ಕ್ರಮ ತಗೊಳ್ಳಿ ಅಂತ ಹೇಳೋಣ. ಆದರೆ, ಪೊಲೀಸರು ತನಿಖೆ ಮಾಡಲು ಅವರನ್ನು ಫ್ರೀ ಆಗಿ ಬಿಡಬೇಕು'' ಎಂದರು. ದರ್ಶನ್ ವಾಕ್‌ಗೆ ಶಾಮಿಯಾನ ಅಳವಡಿಕೆ ಆರೋಪವನ್ನು ನಿರಾಕರಿಸಿದ ಗೃಹ ಸಚಿವರು, ''ನಾನು ಇದರ ಬಗ್ಗೆಯೂ ಪೊಲೀಸ್ ಆಯುಕ್ತರಿಗೆ ಕೇಳಿದೆ. ಅದೆಲ್ಲ ಏನೂ ಇಲ್ಲ. ಆ ರೀತಿ ಏನೂ ಇಲ್ಲ ಅಂದ್ರು. ಸಾರ್ವಜನಿಕರಿಗೆ ಠಾಣೆಗೆ ನಿರ್ಬಂಧ ವಿಚಾರವನ್ನೆಲ್ಲ ಸರಿ ಮಾಡಿಸೋಣ, ಜನರು ಬರುವುದಕ್ಕೆ ಅವಕಾಶ ಕೊಡಲು ಹೇಳುತ್ತೇನೆ'' ಎಂದು ತಿಳಿಸಿದರು.
ತುಮಕೂರಿನ ಕಲುಷಿತ ನೀರು ಪ್ರಕರಣ: ತುಮಕೂರಲ್ಲಿ ಕಲುಷಿತ ನೀರು ಪ್ರಕರಣ ವಿಚಾರವಾಗಿ ಪ್ರತಿಕ್ರಿಯಿಸುತ್ತ, ''ಚಿನ್ನೇನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಮಿಶ್ರಣ ಆಗಿದೆ. ಜಾತ್ರಾ ಉತ್ಸವದಲ್ಲಿ ಸೇರಿದ ಸುಮಾರು ನೂರಕ್ಕೂ ಹೆಚ್ಚು ಜನರಿಗೆ ಪರಿಣಾಮ ಆಗಿದೆ. ಸುಮಾರು 30 ರಿಂದ 40 ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ನಾನು ಕೂಡ ಹೋಗಿ ನೋಡಿದ್ದೇನೆ. ಅದರಲ್ಲಿ 73 ವಯಸ್ಸಿನ ಇಬ್ಬರು ತೀರಿಕೊಂಡಿದ್ದಾರೆ. ಮಿಕ್ಕವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಆರಾಮಾಗಿದ್ದಾರೆ'' ಎಂದರು.
''ಈಗಾಗಲೇ ಅಧಿಕಾರಿಗಳು, ಪಿಡಿಒ ಗ್ರಾಮ ಪಂಚಾಯತಿ ಅಧಿಕಾರಿಗಳನ್ನು ಅಮಾನತು ಮಾಡಿದ್ದೇವೆ. ಕೂಡಲೇ ಕ್ರಮ ತೆಗೆದುಕೊಂಡಿದ್ದೇವೆ. ಗ್ರಾಮಸ್ಥರು ಬೇರೆ ವಿವಿಧ ಕಾರಣ ಕೊಟ್ಟಿದ್ದಾರೆ. ಬೆಟ್ಟದಿಂದ ನೀರು ತಂದು ಮಾರುತ್ತಾರೆ ಅಂತೆಲ್ಲ ಆರೋಪಿಸಿದ್ದು, ಪರಿಶೀಲನೆ ಮಾಡಲಾಗುತ್ತದೆ'' ಎಂದು ಪರಮೇಶ್ವರ್ ತಿಳಿಸಿದರು.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣ: ರಾತ್ರಿ ವೇಳೆ ಚಿತ್ರದುರ್ಗದಲ್ಲಿ ಸ್ಥಳ ಮಹಜರು - Spot Inspection In Chitradurga