ಬೆಂಗಳೂರು: ಸಿಎಂ ಆಗುವ ಹಗಲು ಕನಸು ಕಾಣೋಕೆ ಹೋಗಬೇಡಿ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು. ಸದಾಶಿವ ನಗರದ ನಿವಾಸದಲ್ಲಿಂದು ಮಾತನಾಡಿದ ಅವರು, ಸಿಎಂ ಈಗ ಶಕ್ತಿಶಾಲಿ ಇದ್ದಾರೆ, ಇನ್ನಷ್ಟು ಶಕ್ತಿಶಾಲಿ ಆಗ್ತಾರೆ. ದೇಶಪಾಂಡೆಯವ್ರು ಸುಮ್ಮನೆ ಮಾತನಾಡಿದ್ದಾರೆ. ಯಾರೋ ಕೇಳಿದ ಪ್ರಶ್ನೆಗೆ ನಾನು ಹಿರಿಯ ಇದ್ದೇನೆ, ಯಾಕೆ ಸಿಎಂ ಆಗಬಾರದು ಎಂದು ಕ್ಯಾಶ್ಯುವಲ್ ಆಗಿ ಮಾತಾಡಿದ್ದಾರೆ. ಕೇಳಿದ್ದಕ್ಕೆ ಹೇಳ್ತಾರೆ ಅಷ್ಟೇ. ಅದನ್ನು ಅಲ್ಲಿಗೆ ಬಿಟ್ಟುಬಿಡಿ ಎಂದರು.
ಮುಡಾ ಕುರಿತು ಪ್ರತಿಕ್ರಿಯಿಸಿ, ಹೈಕೋರ್ಟ್ನಲ್ಲಿ ಸಿಎಂಗೆ ಹಿನ್ನಡೆ ಆಗುವ ಪ್ರಶ್ನೆಯೇ ಇಲ್ಲ. ಮುಡಾದಲ್ಲಿ ಅವರು ಭಾಗಿಯಾಗಿಲ್ಲ. ದೋಷಮುಕ್ತರಾಗಿ ಹೊರಬರ್ತಾರೆ ಎಂದು ಹೇಳಿದರು.
ಸತೀಶ್ ಜಾರಕಿಹೊಳಿ, ಪರಮೇಶ್ವರ್ ಭೇಟಿ ವಿಚಾರಕ್ಕೆ, ಭೇಟಿ ಮಾಡಿದ್ರೆ ತಪ್ಪೇನು?. ಎರಡು ತಿಂಗಳ ಹಿಂದೆ ಪರಮೇಶ್ವರ್ ನಮ್ಮ ಮನೆಗೂ ಬಂದಿದ್ದರು. ಮೊನ್ನೆ ನಾನು ಪರಮೇಶ್ವರ್ ಮನೆಗೆ ಹೋಗಿದ್ದೆ. ಕ್ಷೇತ್ರ ಮತ್ತು ಪಕ್ಷದ ವಿಚಾರ ಚರ್ಚೆ ಮಾಡಬಾರದಾ?. ರಾಜಕೀಯವಾಗಿ, ಪಕ್ಷದ ಬೆಳವಣಿಗೆಗಳ ಕುರಿತು ಚರ್ಚೆ ಮಾಡ್ತೇವೆ ಎಂದು ತಿಳಿಸಿದರು.
ಇನ್ನು ಖರ್ಗೆ ಹಿರಿಯರು, ಎಐಸಿಸಿ ಅಧ್ಯಕ್ಷರಿದ್ದಾರೆ. ನಮಗೆ ಎಷ್ಟು ವಯಸ್ಸಾಗಿದೆಯೋ ಅಷ್ಟು ಅವರಿಗೆ ಅನುಭವವಿದೆ ಎಂದು ಹೇಳಿದರು.
ಬಿಜೆಪಿ ಅವಧಿಯಲ್ಲಿ ನಡೆದಿದೆ ಎನ್ನಲಾದ ಕೋವಿಡ್ ಹಗರಣ ಕುರಿತ ತನಿಖಾ ಆಯೋಗದ ವರದಿ ಸಲ್ಲಿಕೆ ಕುರಿತು ಪ್ರತಿಕ್ರಿಯಿಸುತ್ತಾ, ಈ ಹಗರಣದಲ್ಲಿ ಸುಧಾಕರ್ ನಿಶ್ಚಿತವಾಗಿ ಭಾಗಿಯಾಗಿದ್ದಾರೆ. ನಾನು ರಿಪೋರ್ಟ್ ನೋಡಿಲ್ಲ. ಆದ್ರೆ ಆಗ ಯಾರು ಸಚಿವರಿದ್ರೋ ಅವರೇ ಹೊಣೆ. ಬೋವಿ ನಿಗಮ, ಅಂಬೇಡ್ಕರ್ ನಿಗಮ, ಟ್ರಕ್ ಟರ್ಮಿನಲ್ ಬಹಳಷ್ಟು ಹಗರಣಗಳಿವೆ. ಪಿಎಸ್ಐ ಸೇರಿ ಎಲ್ಲಾ ಹಗರಣಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುತ್ತೇವೆ. ಎಲ್ಲವನ್ನೂ ತರಿಸಿಕೊಳ್ತೇವೆ. ಕ್ಯಾಬಿನೆಟ್ ಅಪ್ರೂವಲ್ ಇಲ್ಲದೇ ಬಹಳ ಭ್ರಷ್ಟಾಚಾರ ಮಾಡಿದ್ದಾರೆ ಎಂದರು.
ಕೊರೊನಾ ವೇಳೆ ಸರ್ಕಾರ ಮಾನವೀಯತೆಯಿಂದ ಕೆಲಸ ಮಾಡಬೇಕಿತ್ತು. ಜನರ ಸಾವು-ಬದುಕಿನ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಸರ್ಕಾರ ಫಿಕ್ಸ್ ಮಾಡಿದ್ದಕ್ಕಿಂತ ನಮ್ಮ ಮೆಡಿಕಲ್ ಆಸ್ಪತ್ರೆಯಲ್ಲಿ ಕಡಿಮೆ ಮಾಡಿದ್ವಿ. ನನ್ನ ವೈದ್ಯಕೀಯ ಕಾಲೇಜಿನಲ್ಲಿ ಅದನ್ನು ಮಾಡಿ ತೋರಿಸಿದ್ದೇನೆ. ಒಂದು ಸಾವಿರಕ್ಕೆ ಗುಣಮಟ್ಟದ ಪಿಪಿ ಕಿಟ್ಗಳನ್ನು ತಗೋತಿದ್ವಿ. ಐನೂರು ಇದ್ರೆ ಸರ್ಕಾರಕ್ಕೆ ಇನ್ನೂರವೈತ್ತಕ್ಕೆ ಬರಬೇಕು. ಆದ್ರೆ ಕಳಪೆ ಮಟ್ಟದ ನಾಲ್ಕು ಪಟ್ಟು ಜಾಸ್ತಿ ದುಡ್ಡು ಕೊಟ್ಟು ಪಿಪಿಇ ಕಿಟ್ ಖರೀದಿ ಮಾಡಿದ್ರು. ಹೀಗಾಗಿ ಬಹಳ ದೊಡ್ಡ ಹಗರಣ ನಡೆದಿದೆ ಎಂದು ಹೇಳಿದರು.
ರಾಜ್ಯಪಾಲರನ್ನು ಮೊನ್ನೆ ಭೇಟಿಯಾದಾಗ, ಶಶಿಕಲಾ ಜೊಲ್ಲೆಯವರ ಕೇಸನ್ನು ಡಿಸ್ಪೋಸಲ್ ಮಾಡಿದ್ದೇನೆ, ಬಾಕಿ ಇರುವುದು ಪರಿಶೀಲನೆಗೆ, ಸ್ಪಷ್ಟನೆಗೆ ಕಳಿಸಿದ್ದೇನೆ ಎಂದು ಹೇಳಿದರು. ರಾಜ್ಯಪಾಲರ ನಡೆ ಇಡೀ ರಾಜ್ಯಕ್ಕೆ ಗೊತ್ತಾಗಿದೆ. ರಾಜ್ಯಪಾಲರು ಸ್ವಯಂ ಆಗಿ ಕೆಲಸ ಮಾಡ್ತಿಲ್ಲ. ಕೇಂದ್ರ ಸರ್ಕಾರದ ಕೈಗೊಂಬೆಯಾಗಿ ಇಲ್ಲಿದ್ದಾರೆ. ರಾಜಭವನ ಬಿಜೆಪಿ ಕಚೇರಿಯಾಗಿದೆ ಎಂದು ಎಂ.ಬಿ.ಪಾಟೀಲ್ ಟೀಕಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಅನುಮತಿ ಕೊಟ್ಟರೆ ಸಿಎಂ ಆಗುತ್ತೇನೆ: ಆರ್.ವಿ. ದೇಶಪಾಂಡೆ - RV Deshapande