ದಾವಣಗೆರೆ: ಸರ್ಕಾರ ಬೀಳಿಸಲು ನನ್ನನ್ನು ಯಾರೂ ಸಂಪರ್ಕ ಮಾಡಿಲ್ಲ, ನನ್ನ ಬಳಿ ಯಾರು ಬಂದಿಲ್ಲ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಬಗ್ಗೆ ಏನಾದರೂ ಹೇಳಿದ್ದರೆ ಅವರನ್ನೇ ಕೇಳಿ ಎಂದು ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
ದಾವಣಗೆರೆಯ ತಮ್ಮ ನಿವಾಸದಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಿಜೆಪಿಯವರ ಬಳಿ ಹಣ ಇರಬಹುದು. ಯಾರನ್ನಾದರೂ ಸಂಪರ್ಕ ಮಾಡಿರಲೂಬಹುದು. 50 ಅಲ್ಲ 100 ಕೋಟಿ ಕೊಡುತ್ತೇವೆ ಅಂತಲೂ ಹೇಳಿರಬಹುದು. ಆದರೆ, ನನ್ನ ಬಳಿ ಅಂತವವರು ಯಾರೂ ಬಂದಿಲ್ಲ. ಡಿಕೆ ಶಿವಕುಮಾರ್ ಹೇಳಿದ್ದರೆ ಅವರನ್ನೇ ಕೇಳಬೇಕು ಎಂದ ಶಾಮನೂರು ಶಿವಶಂಕರಪ್ಪ, ವೋಟು ಕೇಳುವುದಕ್ಕೆ ಬರುತ್ತಾರೆ, ಹೋಗುತ್ತಾರೆ ಅಷ್ಟೇ. ಆದರೆ, ನನ್ನತ್ರ ಯಾವುದೇ ದುಡ್ಡು ಬಂದಿಲ್ಲ. ದುಡ್ಡು ಬಂದಿದ್ದರೆ ನಾನೇ ಎಣಿಸಿಕೊಳ್ಳುತ್ತಿದ್ದೆ ಎಂದರು.
ಆದರೆ, ನನಗೆ ರಾಜ್ಯಸಭೆ ಚುನಾವಣೆ ವೇಳೆ ಕೆಲವರು ತಮ್ಮ ಅಭ್ಯರ್ಥಿಯ ಪರ ಮತ ಚಲಾಯಿಸುವಂತೆ ಕೇಳಿದ್ದರು. ಚುನಾವಣೆಯಲ್ಲಿ ಯಾರು ಬೇಕಾದರೂ ಹೀಗೆ ಮತ ಕೇಳಬಹುದು. ಅದೇ ರೀತಿ ಅವರು ಕೇಳಿದ್ದರು. ಆದರೆ, ನಾನು ಮತ ಕೊಡಲ್ಲ, ಬೇಕಾದರೆ ಎಷ್ಟು ದುಡ್ಡು ಬೇಕಾದರೂ ಕೇಳಿ ಕೊಡುವೆ ಎಂದಿದ್ದೆ. ಅದರ ಹೊರತು ಯಾವುದೇ ಚರ್ಚೆ ನಡೆದಿಲ್ಲ ಎಂದರು.
ಲೋಕಸಭೆಗೆ ಪ್ರಭಾ ಮಲ್ಲಿಕಾರ್ಜುನ ಸ್ಪರ್ಧೆ: ಲೋಕಸಭಾ ಚುನಾವಣೆಯಲ್ಲಿ ಪ್ರಭಾ ಮಲ್ಲಿಕಾರ್ಜುನ ಸ್ಪರ್ಧೆ ವಿಚಾರವಾಗಿ ಮಾತನಾಡಿದ ಅವರು, ಲೋಕಸಭಾ ಚುನಾವಣೆ ಪಟ್ಟಿ ಬಿಡುಗಡೆಗೆ ಇನ್ನೂ ಸಮಯವಿದೆ. ಅಲ್ಲಿಯವರೆಗೆ ಏನಾಗುತ್ತೋ ನೊಡೋಣ, ಎಸ್ಎಸ್ ಗಣೇಶ್ ಸ್ಪರ್ಧೆ ಮಾಡ್ತಾರೆ ಎಂದರೇ ಅವರನ್ನೇ ಕೇಳಿ ಎಂದರು.
ದುಡ್ಡು ಇದ್ದರೆ ಚುನಾವಣೆ ಗೆಲ್ಲಲು ಆಗುವುದಿಲ್ಲ; ಜನರ ಸೇವೆ ಮಾಡಿದರೆ ಮಾತ್ರ ಗೆಲುವು: ಸ್ಟಾರ್ ಚಂದ್ರು
ಪಕ್ಷೇತರರಿಗೆ 100 ಕೋಟಿ ರೂ. ವರೆಗೆ ಆಮಿಷ: ಕಾಂಗ್ರೆಸ್ ಆರೋಪಕ್ಕೆ ಕುಪೇಂದ್ರ ರೆಡ್ಡಿ ತಿರುಗೇಟು
ರಾಜ್ಯಸಭೆ ಚುನಾವಣೆಗೂ ಮುನ್ನ ವಿಧಾನಸೌಧದ ಎದುರು ಸುದ್ದಿಗಾರರ ಜೊತೆ ಮಾತನಾಡಿದ್ದ ಕಾಂಗ್ರೆಸ್ ಶಾಸಕ ರವಿಕುಮಾರ್ ಗಾಣಿಗ, ಒಬ್ಬೊಬ್ಬ ಪಕ್ಷೇತರರಿಗೆ ನೂರು ಕೋಟಿ, 150 ಕೋಟಿ ರೂ. ಆಮಿಷ ಒಡ್ಡಿದ್ದಾರೆ ಎಂದು ಆರೋಪಿಸಿದ್ದರು. ಫೆ.27 ರಾಜ್ಯಸಭೆ ಚುನಾವಣೆ ನಡೆಯಲಿದೆ. ಒಬ್ಬ ಅಭ್ಯರ್ಥಿ ಗೆಲುವಿಗೆ 44 ಮತ ಬೇಕು. ನಮ್ಮಲ್ಲಿ ಮೂವರು ಅಭ್ಯರ್ಥಿಗಳು ಗೆಲ್ಲಲು ಸಂಖ್ಯಾಬಲ ಇದೆ. ನಮ್ಮ ಮೂರೂ ಅಭ್ಯರ್ಥಿಗಳು ಅನಾಯಾಸವಾಗಿ ಗೆಲ್ಲಲು ನಂಬರ್ ಇದೆ. ಆದರೆ, ವಿಪಕ್ಷಗಳು ಷಡ್ಯಂತ್ರ ರೂಪಿಸಿವೆ. ಕುಪೇಂದ್ರ ರೆಡ್ಡಿ ವಾಮ ಮಾರ್ಗದಿಂದ ಗೆಲ್ಲಲು ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಆದರೆ, ಕುಪೇಂದ್ರ ರೆಡ್ಡಿ ತಮ್ಮ ಮೇಲಿನ ಆಮಿಷ ಆರೋಪ ತಳ್ಳಿ ಹಾಕಿದ್ದರು.