ಬೆಂಗಳೂರು: ದೇಶದಾದ್ಯಂತ ತೀವ್ರ ಸಂಚಲನಕ್ಕೆ ಕಾರಣವಾಗಿರುವ ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಯುತ್ತಿದ್ದು, ''ಇದುವರೆಗೂ ಯಾರನ್ನೂ ಬಂಧಿಸಿಲ್ಲ'' ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.
''ಆತ್ಮಹತ್ಯೆ ಪ್ರಕರಣ ಸಂಬಂಧ ಮಾರತ್ ಹಳ್ಳಿ ಠಾಣೆಯ ಇನ್ಸ್ಪೆೆಕ್ಟರ್ ತನಿಖಾಧಿಕಾರಿಯಾಗಿದ್ದು, ಮೃತನ ಸಹೋದರ ನೀಡಿದ ದೂರಿನ ಮೇರೆಗೆ ಎರಡು ವಿಶೇಷ ತಂಡ ರಚಿಸಿ ತನಿಖೆ ಕೈಗೊಳ್ಳಲಾಗಿದೆ. ಸಾಕ್ಷಿ ಆಧಾರದ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ'' ಎಂದು ಆಯುಕ್ತರು ಮಾಹಿತಿ ನೀಡಿದ್ದಾರೆ.
''ಇದುವರೆಗೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಯಾರನ್ನೂ ಬಂಧಿಸಿಲ್ಲ. ಯಾರಿಗೂ ನೋಟಿಸ್ ಕೂಡ ನೀಡಿಲ್ಲ. ಮೃತ ವ್ಯಕ್ತಿಗೆ ನ್ಯಾಯ ಕೊಡಿಸುವುದು ನಮ್ಮ ಜವಾಬ್ದಾರಿ. ಮತ್ತು ಕರ್ತವ್ಯ ಆ ನಿಟ್ಟಿನಲ್ಲಿ ತನಿಖೆ ಕೈಗೊಳ್ಳಲಾಗುತ್ತಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು'' ಎಂದು ದಯಾನಂದ ಹೇಳಿದ್ದಾರೆ.
ಘಟನೆ ವಿವರ: ಉತ್ತರ ಪ್ರದೇಶ ಮೂಲದ ಅತುಲ್ ಸುಭಾಷ್ ಡಿಸೆಂಬರ್ 9ರಂದು ಮಾರತ್ ಹಳ್ಳಿಯ ಮಂಜುನಾಥ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಸುಮಾರು 24 ಪುಟಗಳ ಡೆತ್ ನೋಟ್ ಬರೆದಿಟ್ಟು, ಸಾವಿನ ಬಳಿಕ ಮೃತದೇಹ ಗಮನಿಸುವವರಿಗೆ ವ್ಯವಸ್ಥಿತವಾಗಿ ಸೂಚನೆಗಳನ್ನು ನೀಡಿ ಆತ್ಮಹತ್ಯೆಗೆ ಶರಣಾಗಿರುವುದು ಕಂಡು ಬಂದಿತ್ತು.
ಇದನ್ನೂ ಓದಿ: ಟೆಕ್ಕಿ ಅತುಲ್ ಸುಭಾಷ್ ಸಾವು ಪ್ರಕರಣ: ಅತ್ತೆ, ಸೋದರ ಮಾವ ಮನೆಯಿಂದ ಪಲಾಯನ
ಅತುಲ್ ಸಹೋದರ ಬಿಕಾಸ್ ಕುಮಾರ್ ನೀಡಿದ ದೂರಿನ ಅನ್ವಯ ಮಾರತ್ ಹಳ್ಳಿ ಠಾಣೆಯಲ್ಲಿ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಾಯ್ದೆ 108 (ಆತ್ಮಹತ್ಯೆಗೆ ಪ್ರಚೋದನೆ) ಆರೋಪದಡಿ ಎಫ್ಐಆರ್ ದಾಖಲಾಗಿದೆ. ಅದರನ್ವಯ ತನಿಖೆಗಾಗಿ ಪಿಎಸ್ಐ ಜ್ಞಾನದೇವ್ ನೇತೃತ್ವದ ಪೊಲೀಸರ ತಂಡ ಉತ್ತರ ಪ್ರದೇಶಕ್ಕೆ ತೆರಳಿದೆ.
ಇದನ್ನೂ ಓದಿ: ಯುಪಿಯಲ್ಲಿ ಟೆಕ್ಕಿ ಅತುಲ್ ಸುಭಾಷ್ ಅಂತ್ಯಸಂಸ್ಕಾರ: ನ್ಯಾಯಕ್ಕಾಗಿ ಚಿತಾಭಸ್ಮ ಹಿಡಿದು ಪತ್ನಿ ಮನೆಗೆ ತೆರಳಿದ ಕುಟುಂಬ